Untitled Document
Sign Up | Login    
ವಿಕ್ರಮಾದಿತ್ಯ ಯುಗಾರಂಭ

.

ಶನಿವಾರ ನಮ್ಮ ರಕ್ಷಣಾ ಕ್ಷೇತ್ರದ ಐತಿಹಾಸಿಕ ದಿನ. ನೂತನ ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶದ ಅತಿದೊಡ್ಡ ಸಮರನೌಕೆ ಐಎನ್ ಎಸ್ ವಿಕ್ರಮಾದಿತ್ಯ ವನ್ನು ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದ ದಿನ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೋದಿ ಅವರ ದೆಹಲಿಯಿಂದ ಹೊರಗಿನ ಮೊದಲ ಭೇಟಿ ಎಂಬ ದಾಖಲೆಯೂ ಈ ಕಾರ್ಯ ಕ್ರಮದ್ದಾಯಿತು.

ಈ ಯುದ್ಧ ವಿಮಾನ ವಾಹಕ ಸಮರನೌಕೆಯ ಒಟ್ಟು ಉದ್ದ 284 ಮೀಟರು 64 ಮೀಟರ್ ಅಗಲ. ಅಂದರೆ ಮೂರು ಫುಟ್ಬಾಲ್ ಸ್ಟೇಡಿಯಂ ಒಟ್ಟು ಸೇರಿಸಿದರೆ ಆಗುವಷ್ಟು ವಿಸ್ತಾರವಾಗಿದೆ ಈ ನೌಕೆ. ಹಡಗಿನಲ್ಲಿ ಒಟ್ಟು 22 ಡೆಕ್ಗಳಿದ್ದು 1600 ಜನರನ್ನು ಹೊತ್ತೊಯ್ಯಬಲ್ಲದು. ಒಂದು ತಿಂಗಳಿಗಾಗುವಷ್ಟು ಆಹಾರ ದಾಸ್ತಾನು ಇರಿಸುವುದಕ್ಕೂ ಅವಕಾಶವಿದೆ. ಇವೆಲ್ಲ ಸೇರಿ ಒಟ್ಟು 2500 ಕೊಠಡಿಗಳಿವೆ. 20 ಮಹಡಿಗಳಷ್ಟು ಎತ್ತರವನ್ನು ಯುದ್ಧನೌಕೆ ಹೊಂದಿದೆ. ಸಂವಹನ ಮತ್ತು ಇತರೆ ಉದ್ದೇಶಕ್ಕಾಗಿ 23 ಸಾವಿರ ಕಿ.ಮೀ. ಉದ್ದದಷ್ಟು ಕೇಬಲ್ ಕೂಡಾ ಅಳವಡಿಸಲಾಗಿದೆ.

1987ರಲ್ಲಿ ರಷ್ಯಾ ಸೇನೆಗೆ ಸೇರ್ಪಡೆಗೊಂಡ “ಬಾಕು” ಎಂಬ ಹೆಸರಿನ ನೌಕೆ ಇದು. ಕೊನೆಗೆ ನಿರ್ವಹಣೆ ಕಷ್ಟಸಾಧ್ಯ ಮತ್ತು ವೆಚ್ಚದಾಯಕವೆಂದು ಕಂಡು ಬಂದ ಹಿನ್ನೆಲೆಯಲ್ಲಿ ರಷ್ಯಾ ಇದನ್ನು 1996ರಲ್ಲಿ ಸೇನೆಯಿಂದ ಹಿಂಪಡೆದಿತ್ತು. ಇದನ್ನೇ ಭಾರತಕ್ಕೆ ಕೊಡುಗೆ ನೀಡಿದ ರಷ್ಯಾ, ಅದರ ದುರಸ್ತಿ ಮತ್ತು ಮೇಲ್ದರ್ಜೆಗೇರಿಸಲು ಅಂದು ಮರುನಿರ್ಮಾಣ ಮತ್ತು ನವೀಕರಣ ವೆಚ್ಚವಾಗಿ 4881.67 ಕೋಟಿ ರೂಪಾಯಿ ಪಾವತಿಸುವಂತೆ ಬೇಡಿಕೆ ಮುಂದಿಟ್ಟಿತು. ಈ ಬಗ್ಗೆ ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿತ್ತು. ಕೊನೆಗೆ ನವೀಕರಣಕ್ಕೆ ತಗಲಿದ ವೆಚ್ಚವೆಂದು 15ಸಾವಿರ ಕೋಟಿ ಪಡೆದುಕೊಂಡಿತ್ತು. ಈ ಸಮರ ನೌಕೆ ಸೇರ್ಪಡೆಯಿಂದಾಗಿ ಭಾರತದ ನೌಕಾಪಡೆಯ ಸಾಮರ್ಥ್ಯ ಹೆಚ್ಚಾಗಿದೆ.

ಇದು ವಾಜಪೇಯಿ ಸರ್ಕಾರದ ಕೂಸು: ವಾಜಪೇಯಿ ಸರ್ಕಾರದ ಅವಧಿ ಮುಕ್ತಾಯವಾಗುವ ಹಂತದಲ್ಲಿ 2004ರ ವೇಳೆಗೆ ರಷ್ಯಾ ಜತೆಗೆ ಈ ನೌಕೆ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿತ್ತು. 2013ರ ನವೆಂಬರ್ 16ರಂದು ಭಾರತೀಯ ನೌಕಾಪಡೆಗೆ ರಷ್ಯಾ ಈ ಸುಧಾರಿತ ನೌಕೆಯನ್ನು ಹಸ್ತಾಂತರಿಸಿತು.ಅಂದಿನ ರಕ್ಷಣಾ ಸಚಿವ ಎ.ಕೆ.ಆಂಟನಿ ರಷ್ಯಾದಿಂದ ನೌಕೆಯನ್ನು ಸ್ವೀಕರಿಸಿದ್ದರು. ಅಲ್ಲಿಂದ ಅದು ಕಾರವಾರದ ನೌಕಾನೆಲೆಗೆ ವಿಕ್ರಮಾದಿತ್ಯ ಪ್ರಯಾಣ ಬೆಳೆಸಿತ್ತು.

ನೌಕೆಯ ವಿರಾಟ್ ರೂಪ: 284 ಮೀಟರ್ ಉದ್ದ (ನಾಲ್ಕು ಎ380 ಏರ್ಬಸ್ಗಳನ್ನು ಸಾಲಾಗಿ ನಿಲ್ಲಿಸಿದಷ್ಟು ಉದ್ದ), 60 ಮೀಟರ್ ಎತ್ತರ (ಅಮೆರಿಕದ ಲಿಬರ್ಟಿ ಪ್ರತಿಮೆಯ ಮೂರನೇ ಎರಡರಷ್ಟು ಎತ್ತರ), ಸಮುದ್ರದಲ್ಲಿ ನೌಕೆಯ ತೂಕ 44,500 ಟನ್, ಗರಿಷ್ಠ ವೇಗ 30 ನಾಟ್ಸ್ (55.56 ಕಿ.ಮೀ) ಇದೆ. ಇದನ್ನು ತೇಲುವ ವಾಯುನೆಲೆ ಎಂದೇ ಹೇಳುತ್ತಾರೆ. ತೇಲುವ ವಾಯುನೆಲೆ ಎಂದರೆ, ಯುದ್ಧ ವಿಮಾನಗಳ ಕಡಿಮೆ ಅಂತರದ ಟೇಕಾಫ್ ಮತ್ತು ತುರ್ತು ಲ್ಯಾಂಡಿಂಗ್ಗೆ ಅಗತ್ಯ ಸೌಲಭ್ಯಗಳಿರುವ ವ್ಯವಸ್ಥೆಯ ಹಡಗು. ಈ ಸಮರ ನೌಕೆಯಲ್ಲಿ, ಮಿಗ್ 29ಕೆ, ಕಮೋವ್ 31, ಕಮೋವ್ 28, ಎಎಲ್ಎಚ್ ಧ್ರುವ ಮತ್ತು ಇತರೆ ಹೆಲಿಕಾಪ್ಟರ್ಗಳ ಲ್ಯಾಂಡಿಂಗ್, ಟೇಕಾಫ್ಗೆ ಅವಕಾಶವಿದೆ. ಒಟ್ಟು 34(24 ಮಿಗ್+10 ಕಾಪ್ಟರ್) ಯುದ್ಧ ವಿಮಾನಗಳ ವಾಯುನೆಲೆ ಇದು.

ಇದಲ್ಲದೇ, ಹಡಗಿನ ಮೇಲ್ಭಾಗದಲ್ಲಿ ದ್ವೀಪದ ಮಾದರಿ ರಚನೆ ಇದ್ದು, ಮಿನಿ ಪಟ್ಟಣದಂತಿದೆ. ಇಲ್ಲಿ, ವಾಯು ಸಂಚಾರ ನಿಯಂತ್ರಣ ಕೊಠಡಿ, ವಾಯು ಸರ್ವೇಕ್ಷಣಾ ರಾಡಾರ್ ವ್ಯವಸ್ಥೆ, ವಿಮಾನಗಳ ದಿಕ್ಕು ನಿಯಂತ್ರಣ ಕೊಠಡಿ, ನೇವಿಗೇಶನ್ ಮತ್ತು ಸಂವಹನ ವ್ಯವಸ್ಥೆಯ ಕೊಠಡಿಗಳಿವೆ.

 

Author : ಅರವಿಂದ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited