Untitled Document
Sign Up | Login    
ನಮ್ಮ ಬೆಂಗಳೂರು - ನಮ್ಮ ಕೊಡುಗೆ !

ಖಾಸಗಿ ನಿರ್ವಹಣೆಗೆ ಇರುವ ಬಿಬಿಎಂಪಿಯ ಪ್ರಮುಖ ಸಾರ್ವಜನಿಕ ಆಸ್ತಿಗಳಿವು...

ನಮ್ಮ ಬೆಂಗಳೂರಿನ ವ್ಯಾಪ್ತಿ ಹೆಚ್ಚಾಗುತ್ತಿದೆ. ಬೆಂಗಳೂರು ಮಹಾನಗರಪಾಲಿಕೆ ಹೋಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆಗಿದೆ. 200ರ ಹತ್ತಿರ ವಾರ್ಡ್ ಗಳಿದ್ದಾವೆ. ಮೂಲ ಸೌಕರ್ಯ ಒದಗಿಸುವುದು ಮತ್ತು ಪಾಲಿಕೆಯ ಅಧೀನದಲ್ಲಿರುವ ಸಾರ್ವಜನಿಕ ಸ್ವತ್ತುಗಳ ನಿರ್ವಹಣೆಯೇ ಬಹುದೊಡ್ಡ ಸವಾಲು.
"ನಮ್ಮ ಬೆಂಗಳೂರು- ನಮ್ಮ ಕೊಡುಗೆ" ಇದಕ್ಕೆ ಸೂಕ್ತ ಪರಿಹಾರ ಎಂಬುದು ಮೇಯರ್ ಕಟ್ಟೆ ಸತ್ಯನಾರಾಯಣ ಅವರ ಅಭಿಮತ. ಹೀಗಾಗಿ ಮುಂದಿನ ತಿಂಗಳು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶ ನಡೆಸಲು ಬಿಬಿಎಂಪಿ ತೀರ್ಮಾನಿಸಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಮಯಾವಕಾಶ ನೋಡಿಕೊಂಡು ದಿನಾಂಕ ನಿಗದಿಗೊಳಿಸಲಾಗುವುದು ಎಂದು ಮೇಯರ್ ತಿಳಿಸಿದ್ದಾರೆ.

ಏನಿದು ಯೋಜನೆ?

ಬೆಂಗಳೂರು ಎಂದರೆ ಕಾರ್ಪೊರೆಟ್ ಜಗತ್ತು ಎಂದು ಬೇರೆ ಹೇಳಬೇಕಾಗಿಲ್ಲ. ಕಾರ್ಪೊರೆಟ್ ಸಂಸ್ಥೆಗಳು, ಎನ್ ಜಿಒಗಳು, ರೆಸಿಡೆಂಟ್ ವೆಲ್ಫೇರ್ ಆರ್ಗನೈಸೇಷನ್ ಗಳು ಬಹಳಷ್ಟಿವೆ. ಇವೆಲ್ಲವೂ ತಮ್ಮ ಕಾರ್ಪೊರೆಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ ಆರ್) ಯೋಜನೆಯಡಿ ಸಾರ್ವಜನಿಕ ಆಸ್ತಿ ನಿರ್ವಹಣೆ ಮಾಡಲು ಮುಂದಾದರೆ ಸಾಕು. ಬಿಬಿಎಂಪಿಯ ಬಹುಪಾಲು ಹೊರೆ ಕಡಿಮೆಯಾಗಲಿದೆ. ಈಗಾಗಲೇ ಕೆಲವು ಸಂಸ್ಥೆಗಳು ಇಂಥ ಕೆಲಸ ನಿರ್ವಹಿಸುತ್ತಿವೆ. ಇದನ್ನೇ ಮುಂದಿಟ್ಟುಕೊಂಡು ಬಿಬಿಎಂಪಿ ರೂಪಿಸಿದ ಹೊಸ ಯೋಜನೆ "ನಮ್ಮ ಬೆಂಗಳೂರು- ನಮ್ಮ ಕೊಡುಗೆ''.

ಪ್ರೇರಣೆ ಏನು?
ಎರಡು ವರ್ಷ ಹಿಂಧೆ ಭಾರತೀಯ ವಿದ್ಯಾಭವನದ ಜತೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡು ಶ್ರೀರಾಂಪುರದ ಶಾಲೆಯ ನಿರ್ವಹಣೆಯ ಜವಾಬ್ದಾರಿ ವಹಿಸಿತ್ತು. ಶ್ರೀರಾಂಪುರ ಬಿಬಿಎಂಪಿ ಶಾಲೆ ಎಂದರೆ ಎಲ್ಲರೂ ಮೂಗು ಮುರಿಯುವ ಪರಿಸ್ಥಿತಿ ಇತ್ತು. ಆದರೆ, ಈಗ ಆ ಶಾಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಿಸಿದ್ದಲ್ಲದೆ, ಮಕ್ಕಳನ್ನು ಆ ಶಾಲೆಗೆ ಸೇರಿಸಲು ಪಾಲಕರು ಸರದಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಹೊಸ ಪ್ರಯೋಗದಿಂದಾಗಿ ಸರ್ಕಾರಿ ಶಾಲೆಯಲ್ಲಿ ಆದ ಬದಲಾವಣೆಯ ಫಲಿತಾಂಶವನ್ನು ಬಿಬಿಎಂಪಿ ಗಮನಿಸಿತ್ತು. ಇದೇ ಯೋಜನೆಯನ್ನು ಉಳಿದಿರುವ ಸಾರ್ವಜನಿಕ ಆಸ್ತಿಪಾಸ್ತಿಗೂ ಅನ್ವಯಿಸಿದರೆ ಹೇಗೆ ಎಂಬ ಚಿಂತನೆ ಮೂಡಿತು.

ಯೋಜನೆಗೆ ಸಮಿತಿ
ನಮ್ಮ ಬೆಂಗಳೂರು - ನಮ್ಮ ಕೊಡುಗೆ ಯೋಜನೆ ಉಸ್ತುವಾರಿ ಗಮನಿಸುವುದಕ್ಕಾಗಿ "ಅಡ್-ಹಾಕ್ ಕಮಿಟಿ"ಯೊಂದನ್ನು ಬಿಬಿಎಂಪಿ ರಚಿಸಿದೆ. ಸುಂಕೇನಹಳ್ಳಿ ಕೌನ್ಸಿಲರ್ ಪಿ.ಎನ್.ಸದಾಶಿವ ಈ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಈ ಯೋಜನೆ ಅನುಷ್ಠಾನಕ್ಕಾಗಿ ಈಗಾಗಲೇ ಗುರುತಿಸಿರುವ ಪಾರ್ಕ್, ಶಾಲೆ, ಮೈದಾನ, ಆಸ್ಪತ್ರೆಗಳ ನಿರ್ವಹಣೆಗೆ ಖಾಸಗಿಯವರ ಜತೆಗೆ ಒಪ್ಪಂದ ಏರ್ಪಟ್ಟ ನಂತರ ಈ ಕಮಿಟಿ ಅಸ್ತಿತ್ವದಲ್ಲಿ ಇರುವುದಿಲ್ಲ.

ಪಾರ್ಕ್, ಮೈದಾನ ಮೊದಲಾದವುಗಳ ನಿರ್ವಹಣೆ ಖಾಸಗಿಯವರಿಗೆ ಒಪ್ಪಿಸಿದರೂ, ಅವರು ಸಾರ್ವಜನಿಕರಿಂದ ಶುಲ್ಕ ಪಡೆಯುವಂತಿಲ್ಲ. ಈ ಎಲ್ಲ ನಿಬಂಧನೆಗೊಳಪಟ್ಟೇ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಈ ಪ್ರಯತ್ನದಿಂದ ಬಿಬಿಎಂಪಿ ಬೊಕ್ಕಸಕ್ಕೆ ಕನಿಷ್ಠ ವಾರ್ಷಿಕ 200 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎನ್ನುತ್ತಾರೆ ಕೌನ್ಸಿಲರ್ ಪಿ.ಎನ್.ಸದಾಶಿವ.

ಕೊನೆ ಮಾತು: ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನವಾದರೆ ಬಿಬಿಎಂಪಿ ಹಣ ಉಳಿತಾಯವಾಗಲಿದೆ ಎಂಬುದೇನೋ ನಿಜ. ಆದರೆ, ಖಾಸಗಿಯವರ ಸಹಭಾಗಿತ್ವ ಹೇಗಿರಬಹುದು ಎಂಬುದು ಸದ್ಯದ ಪ್ರಶ್ನೆ.

 

Author : ಬೆಂ.ಸ. 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited