Untitled Document
Sign Up | Login    
ಪೀಸ್ ಆಟೊ ಏರಿ, ನೆಮ್ಮದಿಯ ಸಂಚಾರ ಮಾಡಿ


ಸರ್ವೆ ಸಾಮಾನ್ಯವಾಗಿ ಆಟೊ ಚಾಲಕರ ಬಗ್ಗೆ ಒಳ್ಳೆ ಅಭಿಪ್ರಾಯವೆಂಬುದಿಲ್ಲ. ಅದು ಅವರ ಕಿರುಕುಳ, ವರ್ತನೆಯಿಂದ ಇರಬಹುದು. ಆದರೆ ಈಗ ಇಂತಹ ಕಿರುಕುಳದಿಂದ ಮುಕ್ತರಾಗಿ ಬೆಂಗಳೂರಿನ ಜನ ನೆಮ್ಮದಿಯಿಂದ ಆಟೊದಲ್ಲಿ ಪ್ರಯಾಣಿಸುವ ನಿಟ್ಟಿನಲ್ಲಿ ’ಪೀಸ್ ಆಟೊ’ಗಳ ಸಂಚಾರ ಆರಂಭವಾಗಿದೆ.

ಆಟೊ ಚಾಲಕರ ಮೇಲಿನ ಆರೋಪದಿಂದ ದೂರಮಾಡಲು, ಪ್ರಯಾಣಿಕರು ಹಾಗೂ ಚಾಲಕರ ನಡುವೆ ಸ್ನೇಹ-ಸೌಹಾರ್ದವನ್ನು ಸಾಧಿಸಿ, ಪ್ರಯಾಣಿಕರಿಗೆ ನೆಮ್ಮದಿಯ ಸೇವೆ ಒದಗಿಸುವ ಉದ್ದೆಶದಿಂದ ಲೇಖಕ ಅನಿಲ್ ಶೆಟ್ಟಿ, ’ವರ್ಲ್ಡ್ ಪೀಸ್ ಕೀಪರ್ಸ್ ಚಳುವಳಿ’ಯಡಿ ಪೀಸ್ ಆಟೊಗಳನ್ನು ಕಾರ್ಯಗತಗೊಳಿಸಿದ್ದಾರೆ.

ಈ ಸೇವೆಗೆ ವಿಶ್ವಸಂಸ್ಥೆ ಕೂಡ ಮಾನ್ಯತೆ ನೀಡಿದೆ. ಕೋರಮಂಗಲದ 3ನೇ ಬ್ಲಾಕ್ ನಲ್ಲಿ 7 ಪೀಸ್ ಆಟೋಗಳಿಗೆ ಚಾಲನೆ ನೀಡಿ, ನಿಲ್ದಾಣವನ್ನು ನಿರ್ಮಿಸಲಾಗಿದೆ. ಇಲ್ಲಿಯವರೆಗೆ ನಗರದಲ್ಲಿ ಒಟ್ಟು 15 ಶಾಂತಿ ಆಟೊ ಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಹೆಚ್ಚಿಸುವ ಯೋಚನೆಯೂ ಅನಿಲ್ ರಿಗಿದೆ.

ಸಾಮಾನ್ಯ ಆಟೊಗಳಿಗೂ ಈ ಪೀಸ್ ಆಟೊಗಳಿಗೂ ಯಾವುದೆ ವ್ಯತ್ಯಾಸವಿಲ್ಲ. ಆದರೆ ಈ ಆಟೊಗಳನ್ನು ವಿಶೇಷವಾಗಿ ಮರುವಿನ್ಯಾಸಗೊಳಿಸಲಾಗಿದೆ. ಅಂದರೆ ಆಟೊದ ಒಳಗೂ, ಹೊರಗೂ ಶಾಂತಿ ಸಂಕೇತದ ಘೋಷಣೆಗಳನ್ನು ಬರೆಸಲಾಗಿದೆ. ಮಳೆಗೆ ನೆನೆಯದಂತೆ ಆಟೊದ ಬಲಬದಿಯ ತೆರೆದ ಜಾಗಕ್ಕೆ ರಕ್ಷಣೆ ಒದಗಿಸಲಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ದಿನ ಪತ್ರಿಕೆಗಳು, ನಿಯತಕಾಲ್ಕೆಗಳು ಹಾಗೂ ಇತರ ಪುಸ್ತಕಗಳನ್ನೊಳಗೊಂಡ ಮಿನಿ ಲೈಬ್ರರಿಯನ್ನು ನಿರ್ಮಿಸಲಾಗಿದೆ.
ಇವುಗಳ ಜೊತೆಗೆ ಪ್ರಯಾಣಿಕರು ಆಟೊಗೆ ಹತ್ತುವ ವೇಳೆ ಮುಗುಳ್ನಗೆಯೊಂದಿಗೆ ಬರಮಾಡಿಕೊಳ್ಳುವುದು, ಪ್ರಯಾಣಿಕರೊಂದಿಗೆ ಸೌಜನ್ಯದ ವರ್ತನೆ, ಸಭ್ಯ ಪದಗಳ ಬಳಕೆ, ರಸ್ತೆ ನಿಯಮ ಹಾಗೂ ಕಾನೂನು ಪಾಲನೆ ಹೇಗಿರಬೇಕು ಎಂಬುದರ ಬಗ್ಗೆ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ. ಮಾತ್ರವಲ್ಲ ಪ್ರಯಾಣಿಕರು ತಮ್ಮ ಅನುಭವವನು ಹಂಚಿಕೊಳ್ಳಲು ಫೀಡ್ ಬ್ಯಾಕ್ ಪುಸ್ತಕಗಳನ್ನು ಇಡಲಾಗಿದೆ. ಆಟೊ ಹಾಗೂ ಚಾಲಕನ ಬಗ್ಗೆ ಯಾವುದೇ ದೂರುಗಳಿದ್ದರೂ ಸಲ್ಲಿಸಬಹುದು.

ಪೀಸ್ ಆಟೊಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರಿಗಾಗಿ ವರ್ಲ್ಡ್ ಪೀಸ್ ಕೀಪರ್ಸ್ ಮೂವ್ ಮೆಂಟ್ ವತಿಯಿಂದ ಸ್ವಸಹಾಯ ನಿಧಿ ಸ್ಥಾಪಿಸಲಾಗಿದೆ. ಯಾವುದೇ ಚಾಲಕರಿಗೆ ತುರ್ತು ಸಂದರ್ಭದಲ್ಲಿ ಬಡ್ಡಿ ರಹಿತ 5 ಸಾವಿರ ರೂ. ಸಾಲ ವಿತರಿಸಲಾಗುವುದು. ಚಾಲಕರ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದರ ಜೊತೆಗೆ ಚಾಲಕರ ಕಾರ್ಯಕ್ಷಮತೆಯನ್ನು ಪ್ರೋತ್ಸಾಹಿಸಲು ಹಾಗೂ ಮಾದರಿ ಚಾಲಕರನ್ನು ರೂಪಿಸುವ ಉದ್ದೇಶದಿಂದ ಬರುವ ಫೆಬ್ರವರಿಯಿಂದ ಪ್ರತಿ ತಿಂಗಳು ಬೆಸ್ಟ್ ಆಟೊ ಡ್ರೈವರ್ ಪ್ರಶಸ್ತಿ ನೀಡಲಾಗುತ್ತದೆ ಎಂದು ಅನಿಲ್ ತಿಳಿಸುತ್ತಾರೆ.

ಬೆಂಗಳೂರನ್ನು ವಿಶ್ವದ ಶಾಂತಿಯುತ ನಗರವನ್ನಾಗಿಸುವ ನಮ್ಮ ಯೋಜನೆಗೆ ವೊಕಾರ್ಡ್ ಆಸ್ಪತ್ರೆಯ ಡಾ.ಹುಜೈಫಾ ಖೋರಕಿವಾಲಾ, ಸಮಾಜ ಸೇವಕರಾದ ಸುಭಾಷ್ ರೆಡ್ಡಿ, ಮತ್ತಿತರ ದಾನಿಗಳು ಈ ಸೇವೆಗೆ ನೆರವು ನೀಡುತ್ತಿದ್ದಾರೆ. ಏನೆ ಇರಲಿ ಇನ್ನು ಮುಂದಾದರೂ ನಗರದಲ್ಲಿ ಶಾಂತಿ ಆಟೊ ಸಂಚಾರದಿಂದ ಪ್ರಯಾಣಿಕರಿಗೆ ನೆಮ್ಮದಿ ದೊರಕಲಿ.

 

Author : ಸಂಗ್ರಹ ವರದಿ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited