Untitled Document
Sign Up | Login    
ಅಮೆರಿಕದಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುತ್ತಿರುವ ರಮಿತಾ

ಭಾರತೀಯ ಸಂಸ್ಕೃತಿಯ ಬಗ್ಗೆ ರಮಿತಾಳಿಗೆ ಇನ್ನಿಲ್ಲದ ಒಲವು...

ಇಂದು ನಮ್ಮ ದೇಶದ ಸಂಸ್ಕೃತಿ ಅವನತಿಯ ಅಂಚಿನತ್ತ ಸಾಗುತ್ತಿದೆ, ಅದರ ಮೌಲ್ಯಗಳನ್ನು ಇಂದಿನ ಪೀಳಿಗೆಯವರು ಮರೆಯುತ್ತಿದ್ದಾರೆ ಎಂಬುದು ಗಾಢವಾಗಿ ಕೇಳಿ ಬರುತ್ತಿರುವ ಮಾತುಗಳು. ಆದರೆ ಈ ರೀತಿಯ ಭಾವನೆಗಳಿಗೆ ತದ್ವಿರುದ್ಧವೆಂಬಂತೆ ಭಾರತ ಮೂಲದ ಕಲಾವಿದೆಯೊಬ್ಬಳು ನ್ಯೂಯಾರ್ಕ್ ನಲ್ಲಿ ಹುಟ್ಟಿ ಬೆಳೆದರೂ ಭಾರತೀಯ ಸಂಸ್ಕೃತಿಯ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿದ್ದಾರೆ.

ಇದಕ್ಕೆ ಪೂರಕವಾಗಿ ತಾಯ್ನಾಡನ್ನು ಮರೆಯದ ಕನ್ನಡದ ಕುವರಿ ಕುಮಾರಿ ರಮಿತಾ ಗೌಡ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ತನ್ನ ಭರತನಾಟ್ಯದ "ರಂಗಪ್ರವೇಶ" (ಅರಂಗೇಟ್ರಂ) ಪ್ರದರ್ಶನ ನೀಡಿ, ಕಿಕ್ಕಿರಿದು ನೆರೆದ ಪ್ರೇಕ್ಷಕರ ಮನರಂಜಿಸಿದಳು. 2010ರಲ್ಲಿ ಅಮೆರಿಕದಲ್ಲಿ ನಡೆದ 'ಅಕ್ಕ' ಸಮ್ಮೇಳನದಲ್ಲಿ ಖ್ಯಾತ ಕಲಾವಿದೆ ಹೇಮಾ ಪಂಚಮುಖಿ ಅವರ ಭರತನಾಟ್ಯ ಪ್ರದರ್ಶನದಿಂದ ಪ್ರಭಾವಿತಳಾದ ರಮಿತಾ ತನ್ನನ್ನು ಅವರ ಶಿಷ್ಯೆಯಾಗಿ ಸ್ವೀಕರಿಸಲು ಕೇಳಿಕೊಂಡಳು. ಅವರ ಮಾರ್ಗದರ್ಶನದಲ್ಲಿ ಪಳಗಿದ ರಮಿತಾ ಉತ್ತಮ ಕಲಾವಿದೆಯಾಗಿ ಹೊರಹೊಮ್ಮಿ ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದ್ದಾಳೆ. 2011 ರಲ್ಲಿ 49ನೇ ಬೆಂಗಳೂರು ಗಣೇಶೋತ್ಸವದಲ್ಲಿ ರಮಿತಾ ಭರತನಾಟ್ಯ ಪ್ರದರ್ಶನ ನೀಡಿದ್ದಳು.

ಆರಂಗೇಟ್ರಂ ಸಮಾರಂಭದಲ್ಲಿ ಉಪಸ್ಥಿತರಿದ್ದ ಆದಿ ಚುಂಚುನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನಟ ಅಂಬರೀಶ್ ಮುಂತಾದ ಗಣ್ಯರು ಈ ಯುವ ಕಲಾವಿದೆಯನ್ನು ಹರಸಿದರು.

ಅಪ್ಪ ಡಾ.ರಮೇಶ್, ಅಮ್ಮ ಡಾ.ಮಮತಾ ಹಾಗೂ ತಮ್ಮ ರೋನಕ್ ಜೊತೆ ರಮಿತಾ...
ಅಮೆರಿಕದಲ್ಲಿ ನೆಲೆಸಿರುವ ಡಾ. ರಮೇಶ್ ಗೌಡ ಮತ್ತು ಡಾ. ಮಮತಾ ಗೌಡ ದಂಪತಿಯ ಪುತ್ರಿ ರಮಿತ ಗೌಡ. ಇವಳು ದಿ.ನ್ಯಾಯಮೂರ್ತಿ ದೊಡ್ಡಕಾಳೇ ಗೌಡ ಹಾಗೂ ಶ್ರೀಮತಿ ಯಶೋದಮ್ಮ ದೊಡ್ಡಕಾಳೇ ಗೌಡ ಅವರ ಮೊಮ್ಮಗಳು. ರೋನಕ್ ಗೌಡ ಈಕೆಯ ಪುಟ್ಟ ತಮ್ಮ. 15 ಸೆಪ್ಟೆಂಬರ್ 1996ರಲ್ಲಿ ಜನಿಸಿದ ರಮಿತಾಳಿಗೆ ವಿದೇಶದಲ್ಲಿದ್ದರೂ ಭಾರತೀಯ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿಯ ಸೊಬಗಿನತ್ತ ವಿಶೇಷ ಆಸಕ್ತಿ.

6ನೇ ವಯಸ್ಸಿನಲ್ಲೇ ಭಾರತೀಯ ಶಾಸ್ತ್ರೀಯ ನೃತ್ಯ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದಳು. 8ನೇ ವಯಸ್ಸಿಗೆ ನ್ಯೂ ಜೆರ್ಸಿಯಲ್ಲಿ ಗುರು ಶ್ರೀಮತಿ, ಪದ್ಮಾ ತ್ಯಾಗರಾಮ್ ಅವರಲ್ಲಿ (ಅಭಿನಯ ಭರತನಾಟ್ಯ ಶಾಲೆ) ಭರತನಾಟ್ಯ ಅಭ್ಯಾಸ ಮಾಡತೊಡಗಿದಳು. ಲಿವಿಂಗ್ ಟನ್ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ರಮಿತಾ ಹಲವು ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾಳೆ. ಜೊತೆಗೆ ಗಿಟಾರ್ ಮತ್ತು ಕೊಳಲು ವಾದ್ಯಗಳಲ್ಲಿ ತರಬೇತಿಯನ್ನು ಹೊಂದುತ್ತಿದ್ದಾಳೆ.
ನನಗೆ ಭಾರತೀಯ ಸಂಸ್ಕೃತಿ ಅಚ್ಚುಮೆಚ್ಚು..
"ನನಗೆ ಭಾರತೀಯ ಸಂಸ್ಕೃತಿ ಅಚ್ಚುಮೆಚ್ಚು. ಮೇಲಾಗಿ ನನ್ನವರೆಲ್ಲರೂ ಹೆಚ್ಚಾಗಿ ಬೆಂಗಳೂರಿನಲ್ಲೇ ಇರುವುದರಿಂದ ರಂಗಪ್ರವೇಶ ಪ್ರದರ್ಶನವನ್ನು ಬೆಂಗಳೂರಿನಲ್ಲೇ ಹಮ್ಮಿಕೊಳ್ಳುವುದು ನನ್ನ ಮಹದಾಸೆಯಾಗಿತ್ತು" ಎನ್ನುತ್ತಾಳೆ ರಮಿತಾ. ಬೆಂಗಳೂರಿನಲ್ಲಿರುವ ಉದ್ಯಮಿ ಶ್ರೀ. ಎ.ಮರಿಯಪ್ಪ ಮತ್ತು ಶ್ರೀಮತಿ ಜಯರತ್ನ ಅವರು ತಮ್ಮ ಮೊಮ್ಮಗಳಾದ ಕುಮಾರಿ ರಮಿತಾಳಿಗೆ ತುಂಬು ಪ್ರೋತ್ಸಾಹ ನೀಡುತ್ತಿದ್ದಾರೆ.

ಅದೇನೆ ಇರಲಿ, ವಿದೇಶದಲ್ಲಿದ್ದರೂ ಭಾರತಿಯ ಕಲೆ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಯುವ ಪ್ರತಿಭೆ ರಮಿತಾ ಉತ್ತಮ ಕಲಾವಿದೆಯಾಗಿ ರೂಪುಗೊಂಡು, ಭಾರತದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಬಿಂಬಿಸಲಿ ಎಂದು ಹಾರೈಸೋಣ.

 

Author : ಜಿ.ಜಿ. ನಾಗರಾಜ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited