Untitled Document
Sign Up | Login    
ನಾಯಕರ ಮನಮೋಹಕ ಕ್ರಿಕೆಟ್ಮಾತು

ಗೋಕುಲ್ ನಾಯಕ

ಆವತ್ತಿಂದ ಇವತ್ತಿನವರೆಗೂ ಆಡಿ ಹೋಗಿರೋ ಕ್ರಿಕೆಟ್ ಆಟಗಾರರ ಹೆಸರನ್ನು ನೀವು ನೀಟಾಗಿ ಹೇಳಬಲ್ಲಿರಾ? ಆ ಬೌಲಿಂಗ್ರಾಯ ಎಲ್ಲಿ? ಯಾವಾಗ? ಹೇಗೆ ವಿಕೆಟ್ ಹಾರಿಸಿದ? ಅದೂ ಯಾವ ಇಸವಿನಲ್ಲಿ ಆತ ಆಕ್ರಮಣಕಾರಿ ಧಾಳಿ ಮಾಡಿದ? ಅಂತೆಲ್ಲಾ ನೀವು ಯಥಾವತ್ತಾಗಿ ಬಾಯಲ್ಲಿ ಅಚ್ಚು ಹೊಡೆಯಬಲ್ಲಿರಾ?

ಹಾಗಾದ್ರೆ ಹೇಳಿ ನೋಡೋಣ ದ್ರಾವಿಡ್ ಮೊದಲ ಸೆಂಚುರಿ ಭಾರಿಸಿದ್ದು ಯಾವಾಗ? ಕುಂಬ್ಳೆ ಮೊದಲು ವಿಕೆಟ್ ಹಾರಿಸಿದ್ದು ಯಾವ ಗ್ರೌಂಡಲ್ಲಿ? ಅವನ ಬಾಲಿಗೆ ಬಲಿ ಬಿದ್ದ ಆ ಬ್ಯಾಟ್ಸ್ಮ್ಯಾನ್ ಯಾರೋ? ಅಯ್ಯಯ್ಯೋ! ಈ ತುಂಟ ಪ್ರಶ್ನೆ ಕೇಳಿ ದಂಗು ಬಿದ್ದಿರಾ? ಹಾಗಂತ ಇಂತಹುದೇ ಪ್ರಶ್ನೆಗಳನ್ನು ನೀವು ಗೋಕುಲ್ ನಾಯಕರ ಕಿವಿ ಬಳಿ ಹಾರಿಸಿದರೆನ್ನಿ. ಆಗ ಅವರ ಬಾಯಿಂದ ಫಟಫಟಾಂತ ಉದುರುವ ಉತ್ತರದ ಸಿಕ್ಸರ್ ನೋಡಿ..ಯಾರಾದರೂ ಸೋಜಿಗಗೊಳ್ಳುತ್ತಾರೆ. ಮಾತಲ್ಲೇ ಆ ದಿನದ ಕ್ರಿಕೆಟ್ ಗ್ರೌಂಡು ಸುತ್ತಿಸುವ ಆ ಬಾಯಿಯ ಆಟ ಯಾವ ಕ್ರಿಕೆಟ್ ಪ್ರೇಮಿಗಾದರೂ ಇಷ್ಟವಾಗುತ್ತದೆ.

ಊಹುಂ. ಕಾರ್ಕಳದ ಗೋಕುಲ್ ನಾಯಕರು. ಕ್ರಿಕೆಟ್ ಮಾತಿನ ಪಂಡಿತರು, ಕ್ರಿಕೆಟ್ನ ಬಗ್ಗೆ ಚಾ ಕಟ್ಟೆಯಿಂದ ಹಿಡಿದು ಕ್ಲಾಸು ರೂಮಿನವರೆಗೂ ಖಂಡಾಪಟ್ಟೆ ಚರ್ಚೆ ಮಾಡೋ ಬಾಯಿಗಳೇನೋ ಇದ್ದಾವೆ. ಹಾಗಂತ ಅದೆಷ್ಟೋ ವರ್ಷದ ಹಿಂದಿನ ಕ್ರಿಕೆಟ್ ಆಟದ ಒಂದೊಂದು ಕ್ಷಣಗಳನ್ನು ಕಣ್ಣಿನ ಟಿ.ವಿ ಮೇಲೆ ಮೆಲುಕು ಹಾಕುತ್ತಾ, ನಡೆದ ಚಿಕ್ಕ ಚಿಕ್ಕ ಸಂಗತಿಗಳನ್ನು ಚೊಕ್ಕದಾಗಿ ತಲೆಯಲ್ಲಿ ಅಪ್ಡೇಟ್ ಮಾಡಿಕೊಳ್ಳುವ ಜನ ಕಮ್ಮಿಯೇ ಎನ್ನಬೇಕು. ನಮ್ಮಲ್ಲಿ ಕ್ರಿಕೆಟ್ಟನ್ನು ಹೆಚ್ಚಿನ ಮಂದಿ ಟೈಮ್ ಪಾಸ್, ಮನರಂಜನೆಗಾಗಿ ನೋಡುತ್ತಾರೆ ಬಿಟ್ಟರೆ, ಅಲ್ಲಿನ ತಾಂತ್ರಿಕ ನೈಪುಣ್ಯತೆಯನ್ನೂ, ಬ್ಯಾಟ್ ಹಿಂದಿನ ಸತ್ಯಗಳನ್ನೂ, ತಮ್ಮ ಮೂರನೇ ಕಣ್ಣಿಂದ ನೋಡದ "ದೂರ್”ದರ್ಶಕರೇ ಜಾಸ್ತಿ.

ಆದರೆ ಗೋಕುಲ್ ನಾಯಕರ ಕಣ್ಣಲ್ಲಿ ಆ ದಿನದ ಚೆಂಡಿನಾಟದ ನೇರ ಪ್ರಸಾರ ಇನ್ನೂ ಆಗುತ್ತಲಿದೆ. ಕಿವಿಯಲ್ಲಿ ಕಾಮೆಂಟರಿಯ ಕಲರವ ಇನ್ನೂ ಮೊಳಗುತ್ತಿದೆ. ಗವಾಸ್ಕರ್ ಇನ್ನೂ ಇವರ ಕಣ್ಣ ಕ್ರೀಡಾಂಗಣದಲ್ಲಿ ಬ್ಯಾಟು ಹಿಡಕೊಂಡು ಬರುತ್ತಿದ್ದಾನೆ. ಹಾಗಂತ ನೆನಪುಗಳನ್ನು ಮೆಲುಕು ಹಾಕೋಕೆ ಇವರೇನೂ ಕ್ರಿಕೆಟ್ ತಾರೆಯಲ್ಲ. ಕಾಮೆಂಟೇಟರೂ ಅಲ್ಲ. ನಮ್ಮಂತೆಯೇ ಸಾಮಾನ್ಯ ಮನುಷ್ಯಾನೇ. ಅದರೆ ಕ್ರಿಕೆಟ್ ಬಗ್ಗೆ ಮಾತಾಡುದರಲ್ಲಿ, ಎಷ್ಟೋ ವರುಷದ ಹಿಂದಿನ ಕ್ರಿಕೆಟ್ ನೆನಪುಗಳನ್ನು ಮೆಲುಕು ಹಾಕೋದರಲ್ಲಿ ಮಾತ್ರ ಅಸಾಮಾನ್ಯ. ಅದೆಷ್ಟು ಹೊತ್ತು ಬೇಕಾದ್ರೂ ಕ್ರಿಕೆಟ್ ಭಾಷಣ ಮಾಡುದರಲ್ಲಿ ಇವರ ಬಾಯಿ ಭೂಷಣ. ನಾಯಕರೂ ಕ್ರಿಕೆಟ್ ಜಗತ್ತನ್ನು, ಬೆರಗುಗಣ್ಣಿಂದ ನೋಡುತ್ತಾ, ಆಟಗಾರರ ಮನಸ್ಸನ್ನೊಮ್ಮೆ ಹೊಕ್ಕಿ ಬರುವಷ್ಟು ಚಾಣಾಕ್ಷರು. ನೀವು ಕ್ರಿಕೆಟ್ ಬಗ್ಗೆ ಏನೇ ಕೇಳಿ, ಅದಕ್ಕೆ ಉತ್ತರ ಕೊಡೋದು ಗೋಕುಲ್ ನಾಯಕರಿಗೆ ಬಾಳೆ ಹಣ್ಣು ಸುಲಿಯೋ ಹಾಗೆ. ಈ ನಾಯಕರಿಗೆ ಅದೇನು ಶಕ್ತಿಯೋ ಗೊತ್ತಿಲ್ಲ. ಆಗಿನ ಕ್ರಿಕೆಟ್ ಬೆಳವಣಿಗೆಯನ್ನೂ, ಆಟಗಾರರ ನಡಾವಳಿಯನ್ನೂ ಖಂಡಾ ತುಂಡವಾಗಿ ಮಾತಾಡುತ್ತಾರೆ.
ಫ್ಯಾಕ್ಟರಿಯಲ್ಲಿ ಅನುಭವಿ ಉದ್ಯೋಗಿಯಾಗಿರೋ ಇವರ ಕ್ರಿಕೆಟ್ ಕ್ರಿಯಾಶೀಲತೆಗೆ, ಮಾತಿನ ಲೀಲಾಜಾಲತೆಗೆ, ಹುಬ್ಬೇರಿಸೋ ಮಂದಿ ಚೆಂಡಾಟದ ಬಗ್ಗೆ, ದ್ವಂದ್ವ, ಅನುಮಾನ, ಉಹಾಪೋಹ, ಅಂತೂ ಏನೇ ಬಂದರೂ ಇವರ ಕಿವಿಯ ಬಳಿ ಚೆಂಡಾಡಲು ಬರುತ್ತಾರೆ. ಇವರು ಎಪ್ಪತ್ತರಲ್ಲಿ ಆ ಆಟಗಾರ ಅಷ್ಟು ಹೊಡೆದ, ಹೀಗೆ ಆಡಿದ,ಆ ಗ್ರೌಂಡಿನ ಪಿಚ್ಚು ಬೌಲರ್ಗಳಿಗೆ ಮಾತ್ರ ಯೋಗ್ಯ ಅಂತೆಲ್ಲಾ ಕೊಡುವ ಮಾಹಿತಿಯ ಮೂಟೆಯನ್ನು ನಿಜಕ್ಕೂ ತಡಕಾಡಲು ಹೋದಾಗ ಅದು ನಿಜಾನೇ ಆಗಿರುತ್ತದೆ. ಪೇಪರ್ನಲ್ಲಿ ಬರೋ ಮುಂಚೇನೇ ಬಾಯಲ್ಲಿ ಕ್ರೀಡಾ ವರದಿ ಕೊಡೋ ನಾಯಕರಿಗೆ ಟೂರ್ನಿಗಳಲ್ಲಿ ಬ್ಯಾಟು ಹಿಡಿದ ಅನುಭವವಿದೆ. ಕ್ರೀಡಾ ವಿಶ್ಲೇಶಕರಿಗಿಂತಲೂ ನುರಿತವಾಗಿ ಮಾತನಾಡುವ ಇವರು ಮಾತ್ರ ವಿಶ್ಲೇಶಕರಾಗಿಲ್ಲ.
ಹೌದು, ಕೆಲವೊಮ್ಮೆ ಟಿ.ವಿ ನಿರೂಪಕನಿಂತಲೂ ಜಾಸ್ತಿ ಮಾಹಿತಿ ಗಣಿ ನಮ್ಮಲ್ಲಿರುತ್ತದೆ. ಪರಿಸರ ತಜ್ಞನಿಗಿಂಲೂ ಹೆಚ್ಚು ಮಾಹಿತಿ, ಗಿಡದಲ್ಲಿ ಹೂವು ಕೀಳೋ ಅಜ್ಜಿಗೆ ಕರಗತ. ಫೇಮಸ್ ಭಾಷಣಕಾರನಿಗಿಂತಲೂ ಚೆನ್ನಾಗಿ ಗೂಡಂಗಡಿಯಾತ ಮಾತಾಡುತ್ತಾನೆ. ಆದರೂ ಅವರ್ಯಾರೂ ಟಿ.ವಿ ನಿರೂಪಕರಾಗಿರೋದಿಲ್ಲ, ಪರಿಸರ ತಜ್ಞರಾಗಿರುದಿಲ್ಲ, ಭಾಷಣಕಾರನೂ ಆಗಿರೋದಿಲ್ಲ. ಅಂತಹ ಚಿತ್ರ ವಿಚಿತ್ರ ಕಲೆಗಳು ಅವರಲ್ಲಿ ಅಜ್ಞಾತವಾಗೇ ಕೂತಿರುತ್ತದೆ. ಅಂತಹ ಕಲೆಗಳಿಗೆ ಗೋಕುಲ್ ನಾಯಕ್ ಒಳ್ಳೆ ನಿದರ್ಶನ.

ಇವರನ್ನು ಸಂಪರ್ಕಿಸುವುದಾದರೆ ಮೊ-9591384367

 

Author : ಪ್ರಸಾದ್ ಶೆಣೈ ಆರ್. ಕೆ.

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited