Untitled Document
Sign Up | Login    
ಕಾರಂತರಿಗೆ ಕಾರಂತರೇ ಸಾಟಿ

ಡಾ.ಶಿವರಾಮ ಕಾರಂತ

ಅ. 10, ಇಂದು "ಕಡಲ ತೀರದ ಭಾರ್ಗವ", ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಕೋಟ ಶಿವರಾಮ ಕಾರಂತರ ಜನ್ಮದಿನ.

ಕಾರಂತರ ಬಗ್ಗೆ ಹೇಳುವುದೆಂದರೆ ಬಹುಶ: ಚಿಕ್ಕ ಇರುವೆಯೊಂದು ಹಿರಿಯಾನೆ ಮುಂದೆ ನಿಂತು ವಿವರಿಸಿದಂತೆ. ಆದರೂ ಮಹಾನ್ ಸಾಹಿತಿಯ ಜನ್ಮದಿನದ ನೆನಪಿಗಾಗಿ ಈ ಪುಟ್ಟ ಲೇಖನ.

ಡಾ. ಶಿವರಾಮ ಕಾರಂತರು 1902, ಅಕ್ಟೋಬರ್ 1೦ರಂದು ಉಡುಪಿ ಜಿಲ್ಲೆಯ ಕೋಟದಲ್ಲಿ ಜನಿಸಿದರು. ಕಾರಂತರ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ. ಯವರೆಗೆ ನಡೆದು 1920ರಲ್ಲಿ ಕೊನೆ ಆಯಿತು. ತಮ್ಮ ವಿದ್ಯಾರ್ಥಿ ದೆಸೆಯಲ್ಲೆ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದ ಕಾರಂತರು ತಮ್ಮ ಓದನ್ನು ಅಷ್ಟಕ್ಕೇ ನಿಲ್ಲಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಅವರ ಬದುಕು ಹತ್ತು ಹಲವು ದಿಕ್ಕುಗಳಲ್ಲಿ ಪಸರಿಸಿದೆ.
ಕಾರಂತರು ಸಾಹಿತಿ, ಪತ್ರಿಕೋದ್ಯಮಿ, ನಟ, ನೃತ್ಯಪಟು, ಚಿತ್ರಕಾರ, ಶಿಲ್ಪಿ, ಗಾಯಕ, ಯಕ್ಷಗಾನ ಪ್ರಯೋಗಶೀಲ ಹಾಗೂ ಪರಿಸರ ತಜ್ಞ. ಹೀಗೆ ಅಗಾಧ ಪ್ರತಿಭೆಗಳ ಆಗರ. ಸಪ್ತವರ್ಣದ ಕಾಮನಬಿಲ್ಲಿನಂತೆ. ಆಡು ಮ್ಮುಟ್ಟದ ಸೊಪ್ಪಿಲ್ಲ, ಕಾರಂತರು ಮೆಟ್ಟದ ಮಾರ್ಗವಿಲ್ಲ ಎಂಬ ಮಾತಿದೆ. ಅದು ಅಕ್ಷರಶ: ಸತ್ಯ.

ಭಾಷಾ ಬೋಧನೆಯ ಕಾರ್ಯದಲ್ಲಿಯೂ ಕಾರಂತರು ಮಾಡಿದ ಕೆಲಸ ಅಮೋಘ. ಕನ್ನಡಕ್ಕಾಗಿ ದುಡಿದು, ಕನ್ನಡದಲ್ಲೇ ಬರೆದು, ಕನ್ನಡದ ಮಣ್ಣು-ಸಂಸ್ಕೃತಿಯ ಮಹತ್ವಗಳನ್ನು ವಿಶ್ವ ಸಾಹಿತ್ಯ ಪ್ರಪಂಚದ ಎತ್ತರಕ್ಕೆ ಕೊಂಡೊಯ್ದವರು ಈ ಮಹಾನ್ ಚೇತನ. ಅವರ ಮೂಕಜ್ಜಿಯ ಕನಸುಗಳು ಸಾಹಿತ್ಯ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ಇದು ಕನ್ನಡಕ್ಕೆ ಸಂದ ಮೂರನೇ ಜ್ಞಾನಪೀಠ ಪ್ರಶಸ್ತಿ ಗರಿ.

1925 ರಲ್ಲಿ ವಸಂತ ಎಂಬ ಮಾಸಪತ್ರಿಕೆಯನ್ನು ಅವರು ಆರಂಭಿಸಿದರು. ಕಾರಂತರ ಮೊದಲ ಕಾದಂಬರಿ ವಿಚಿತ್ರ ಕೂಟ. ಮಕ್ಕಳ ಶಿಕ್ಷಣದಲ್ಲಿ ಕಾರಂತರಿಗೆ ತುಂಬಾ ಆಸಕ್ತಿ. ಮಕ್ಕಳಿಗಾಗಿ ಸಾಹಿತ್ಯರಚನೆ ಮಾಡಿದ ಅವರು ಮಕ್ಕಳ ಪ್ರೀತಿಯ ಕಾರಂತಜ್ಜ ಎಂದೇ ಖ್ಯಾತರಾದರು. ವಿಜ್ನಾನದ ಅನೇಕ ಮುಖಗಳನ್ನು ಮಕ್ಕಳಿಗೆ ಪರಿಚಯಿಸಲು ಅವರು ಬರೆದ ಅದ್ಭುತ ಜಗತ್ತು, ಬಾಲ ಪ್ರಪಂಚ ಕನ್ನಡದ ಮಟ್ಟಿಗೆ ಏಕವ್ಯಕ್ತಿ ಜ್ಞಾನಕೋಶ. ತರಂಗ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ 'ಬಾಲವನದಲ್ಲಿ ಕಾತಂತಜ್ಜ' ಅಂಕಣ ಅತ್ಯಂತ ಜನಪ್ರಿಯವಾಗಿತ್ತು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸ್ಥಾಪಿಸಿದ ಬಾಲವನ ಮಕ್ಕಳ ಮೇಲೆ ಅವರಿಗಿದ್ದ ಪ್ರೀತಿಯ ಸಂಕೇತ.

ಯಕ್ಷಗಾನ ಕಲೆ ಕಾರಂತರ ಮತ್ತೊಂದು ಆಸಕ್ತಿಯ ಕ್ಷೇತ್ರ. ಯಕ್ಷಗಾನ ಬಯಲಾಟ ಕೃತಿಗೆ 1959ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ಕಾರಂತರ ಆಸಕ್ತಿ ಚಲನಚಿತ್ರ ಕ್ಷೇತ್ರದ ಕಡೆಯೂ ತಿರುಗಿತು. ಭೂತರಾಜ್ಯ, ಡೊಮಿಂಗೋ ಎಂಬ ಮೂಕಿ ಚಿತ್ರಗಳನ್ನು ಅವರು ನಿರ್ದೇಶಿಸಿದರು.
ಹಲವಾರು ವೈವಿಧ್ಯಮಯ ವಿಷಯಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಬೆಟ್ಟದ ಜೀವ, ಚೋಮನ ದುಡಿ, ಸರಸಮ್ಮನ ಸಮಾಧಿ, ಮೈ ಮನಗಳ ಸುಳಿಯಲಿ, ಬತ್ತದ ಹೊರೆ, ಗೆದ್ದವರ ದೊಡ್ಡಸ್ತಿಕೆ, ಸ್ವಪ್ನದ ಹೊಳೆ, ಒಂಟಿ ದನಿ, ಅಳಿದ ಮೇಲೆ, ಗೊಂಡಾರಣ್ಯ ಕಾರಂತರ ಪ್ರಮುಖ ಕಾದಂಬರಿಗಳು. ಅವರು ಬರೆದ ಮೂಕಜ್ಜಿಯ ಕನಸುಗಳು ಕಾದಂಬರಿಗೆ 1978ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಅವರು 1955 ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕಾರಂತರಿಗೆ ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಹಲವು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ ಗುಳು ಲಭಿಸಿವೆ. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದಿದ್ದರು. ಕನ್ನಡ ವೈಚಾರಿಕತೆಯ ಧೀಮಂತ ಪ್ರತಿನಿಧಿಯಂತಿದ್ದ ಕಾರಂತರ ಬಾಳ್ವೆಯೇ ಒಂದು ಪ್ರಯೋಗಶಾಲೆಯಂತಿತ್ತು. ಆಧುನಿಕ ಮನುಷ್ಯ ಏನೆಲ್ಲ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದೋ ಆ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಕನ್ನಡಿಗರಿಗೆ ಬದುಕಿನ ಮಾದರಿಯಾಗಿದ್ದಾರೆ.

1992 ಡಿಸೆಂಬರ್ 12ರಂದು ಕಾರಂತರು ದೈವದ ಅಧೀನರಾದರು. ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಡಾ.ಶಿವರಾಮ ಕಾರಂತರು ತಾವು ತಿಳಿದುಕೊಂಡಿದ್ದನ್ನೆ ಹೇಳಿದ, ಹೇಳಿದ ಹಾಗೆ ನಡೆದ ಒಂದು ವಿಸ್ಮಯ. ಸಾಹಿತ್ಯ ಲೋಕದ ಬಾನಿನಲ್ಲಿ ನಿರಂತರವಾಗಿ ಮಿನುಗುವ ಬೆಳ್ಳಿಚುಕ್ಕಿ! ನಿಜವಾಗಿಯೂ ಕಾರಂತರಿಂಗೆ ಕಾರಂತರೇ ಸಾಟಿ!!!


(ಚಿತ್ರ ಕೃಪೆಃದಿ.ಹಿಂದು.ಕಾಂ)

 

Author : ಚಂದ್ರಲೇಖಾ ರಾಕೇಶ್ ಭಟ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited