Untitled Document
Sign Up | Login    
ಜೇನುಕಲ್ಲಿನಲ್ಲೊಬ್ಬ ಅಣ್ಣಪ್ಪ ಸ್ವಾಮಿ

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಅಣ್ಣಪ್ಪ ಸ್ವಾಮಿ ದೇವಸ್ಥಾನ

ದಕ್ಷಿಣಕನ್ನಡ ಜಿಲ್ಲೆ ಅಂದ್ರೆ ಹಾಗೇನೇ. ನಂಬಿಕೆ, ಆಚಾರ-ವಿಚಾರ, ಆಚರಣೆಗಳಿಗಿಲ್ಲಿ ವಿಶೇಷ ಸ್ಧಾನವಿದೆ. ಇಲ್ಲಿ ಅನೇಕ ದೇವರು ದೈವಗಳನ್ನು ಜನರು ತಮ್ಮದೇ ಆದ ನಂಬಿಕೆಗಳ ಹಿನ್ನೆಲೆಯಲ್ಲಿ ಆರಾಧಿಸುತ್ತಾರೆ. ಅಂತಹ ದೇವರುಗಳಲ್ಲಿ ಅಣ್ಣಪ್ಪ ಸ್ವಾಮಿ ಕೂಡ ಒಬ್ಬರು.

ಅಣ್ಣಪ್ಪಸ್ವಾಮಿ ಅಂದಾಕ್ಷಣ ನೆನಪಾಗೋದು ಧರ್ಮಸ್ಥಳ. ಆದರೆ ಇಲ್ಲಿ ಹೇಳ ಹೊರಟಿರೋದು ಧರ್ಮಸ್ಥಳದ ಅಣ್ಣಪ್ಪನ ಬಗ್ಗೆಯಲ್ಲ. ಚಾರ್ಮಾಡಿ ಘಾಟಿಯಲ್ಲಿರುವ ಜೇನುಕಲ್ಲು ಅಣ್ಣಪ್ಪ ಸ್ವಾಮಿ ದೇವಾಲಯದ ಬಗ್ಗೆ.

ಈ ಅಣ್ಣಪ್ಪ ಸ್ವಾಮಿ ದೇವಸ್ಥಾನವಿರುವುದು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸಾಗುವಾಗ ಸಿಗುವ ಜೇನುಕಲ್ಲು ಎಂಬಲ್ಲಿ. ಮುಖ್ಯ ರಸ್ತೆಗೆ ತಾಗಿಕೊಂಡೆ ಈ ದೇವಾಲಯವಿರುದರಿಂದ ಭಕ್ತಾದಿಗಳಿಗೆ ಇಲ್ಲಿಗೆ ಭೇಟಿ ನೀಡುವುದು ಕಷ್ಟವಲ್ಲ. ಜೇನುಕಲ್ಲು ಮೂಲಕವಾಗಿ ಸಾಗುವ ಪ್ರತಿಯೊಬ್ಬ ಪ್ರಯಾಣಿಕರು, ವಾಹನ ಚಾಲಕರು ಈ ದೇವಾಲಯದ ಮುಂದೆ ಪ್ರಾರ್ಥಿಸಿಯೇ ಪ್ರಯಾಣ ಮುಂದುವರಿಸುವುದು ವಾಡಿಕೆ. ಅದಕ್ಕೆ ಕಾರಣ ಅಣ್ಣಪ್ಪನ ಮಹಿಮೆ. ಇಡೀ ಚಾರ್ಮಾಡಿ ಘಾಟಿಯನ್ನು ಕಾಯುವುದು ಅಣ್ಣಪ್ಪನೇ ಎನ್ನುವುದು ಭಕ್ತರ ನಂಬಿಕೆ. ಇವನ ಸನ್ನಿಧಿಯಲ್ಲಿ ಬೇಡಿಕೊಂಡು ಸಾಗಿದರೆ ಪ್ರಯಾಣ ಸುರಕ್ಷಿತವೂ ಸುಖಕರವೂ ಆಗಿರುತ್ತದೆ ಅನ್ನುವುದು ಪ್ರಯಾಣಿಕರ ಅನುಭವದ ಮಾತು.

ನಂಬಿದವರನ್ನು ಕಾಯುವ ಅಣ್ಣಪ್ಪ ಸ್ವಾಮಿ
ಜೇನುಕಲ್ಲು ಅಣ್ಣಪ್ಪ ಸ್ವಾಮಿ ದೇವಸ್ಥಾನದ ಹಿಂದೆ ಅತ್ಯಂತ ಸ್ವಾರಸ್ಯಕರವಾದ ಇತಿಹಾಸವಿದೆ. ಅಣ್ಣಪ್ಪ ಸ್ವಾಮಿ ಕಾಶಿಯಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಬರುವಾಗ ಜೇನುಕಲ್ಲಿನಲ್ಲಿ ವಿಶ್ರಾಂತಿ ಪಡೆದುಕೊಂಡು ಹೋದನಂತೆ. ಅದಕ್ಕೆ ಸಾಕ್ಷಿಯಾಗಿ ಇಲ್ಲಿ ಸ್ವಾಮಿಯ ಪಾದವಿದೆ. ನಂತರ ಮನುಷ್ಯ ರೂಪದಲ್ಲೇ ನಡೆದುಕೊಂಡು ಧರ್ಮಸ್ಥಳಕ್ಕೆ ಹೋಗಿ ನೆಲೆನಿಂತನು ಎಂಬುವುದು ಪ್ರತೀತಿ.

ಅಣ್ಣಪ್ಪ ದೇವಸ್ಥಾನಕ್ಕೆ ಪ್ರತಿದಿನ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಜಾತಿ, ಮತ, ಧರ್ಮಗಳ ಭೇದವಿಲ್ಲದೇ ಭೇಟಿ ನೀಡುತ್ತಾರೆ. ಯುಗಾದಿ, ಸಂಕ್ರಾತಿ, ವ್ರತಮಾಲೆ ಸಮಯದಲ್ಲಿ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಈ ದೇವಾಲಯವು ದಿನದ 24ಗಂಟೆಯೂ ತೆರೆದಿರುವುತ್ತದೆ ಎಂಬುವುದು ದೇವಾಲಯದ ಮತ್ತೊಂದು ವಿಶೇಷತೆ ಅನ್ನುತ್ತಾರೆ ಇಲ್ಲಿನ ಅರ್ಚಕರಾದ ರಾಮಕೃಷ್ಣರವರು.
ಅಣ್ಣಪ್ಪನ ಸನ್ನಿಧಿಗೆ ಬರುವ ಭಕ್ತಾದಿಗಳಿಗೆ ಉಳಿದುಕೊಳ್ಳಲು ಇಲ್ಲಿ ವ್ಯವಸ್ಥೆಯಿದೆ. ಅಲ್ಲದೇ, ಈ ವ್ಯವಸ್ಥೆ ಸಂಪೂರ್ಣವಾಗಿ ಉಚಿತವಾಗಿದೆ. ದೇವಾಲಯದ ಹಿಂದಿರುವ ಕಾಡಿನಲ್ಲಿ ಸಂಜೀವಿನಿ ಮರವಿದೆ, ಈ ಮರದ ಗಾಳಿಯ ಸೇವನೆಯಿಂದ ಚರ್ಮರೋಗ, ಅಸ್ತಮಾ, ಬಂಜೆತನ ಮುಂತಾದ ಕಾಯಿಲೆಗಳು ಗುಣವಾಗುತ್ತದೆ ಅನ್ನೋ ನಂಬಿಕೆ ಇಲ್ಲಿಗೆ ಉಳಿದುಕೊಳ್ಳಲು ಬರುವ ಭಕ್ತರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ವಿದ್ಯುತ್ ಸಂಪರ್ಕ ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲದೇ ಇರುವುದು ಭಕ್ತಾದಿಗಳಿಗೆ ಬಹು ದೊಡ್ಡ ಸಮಸ್ಯೆಯಾಗಿದೆ ಅನ್ನುತ್ತಾರೆ 19 ವರ್ಷಗಳಿಂದ ಇಲ್ಲಿಗೆ ಭೇಟಿ ನೀಡುತ್ತಿರುವ ಬೆಂಗಳೂರಿನ ಪೀಣ್ಯ ನಿವಾಸಿ ನರಸಿಂಹಯ್ಯ.

ಒಟ್ಟಿನಲ್ಲಿ ಈ ಅಣ್ಣಪ್ಪಸ್ವಾಮಿ ದೇವಸ್ಥಾನ ಎಲ್ಲರಿಗೂ ನೆಚ್ಚಿನ ತಾಣ. ಭಕ್ತಿಯ ನೆಲೆ. ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವತ್ತ ಸರ್ಕಾರ ಗಮನ ಹರಿಸಬೇಕೆಂಬುವುದು ಭಕ್ತರೆಲ್ಲರ ಬೇಡಿಕೆ.

 

Author : Navya Ayyanakatte

Author's Profile

I am a journalism student, interested in writing on places of tourism interest and picnic spots in rural areas.

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited