ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಈ ವೇಳೆ ಮಾತನಾಡಿದ ಎಸ್.ಎಂ ಕೃಷ್ಣ, ಕಾನೂನು ಅನನುಕೂಲವಾದಾಗ ಅದರ ಉಲ್ಲಂಘನೆಯೇ ಧರ್ಮ. ರಾಜ್ಯದಲ್ಲಿ ಕುಡಿಯುವ ನೀರಿಗೆ ಕೊರತೆ ಇದೆ. ಇಂಥ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡಿ ಎಂದು ನ್ಯಾಯಾಲಯ ಹೇಳಿರುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಲ್ಕು ಸಲಹೆಗಳನ್ನು ನೀಡಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಹೂಳು ತೆಗೆಯುವುದು, ಕಾವೇರಿ ಜಲಭಾಗ್ಯ ನಿಗಮಕ್ಕೆ ಆರ್ಥಿಕ ಶಕ್ತಿ ತುಂಬುವುದು, ಕಾವೇರಿ ಜಲಾನಯನ ವ್ಯಾಪ್ತಿಯ ರೈತರಿಗೆ ಪರಿಹಾರ ನೀಡಿ ಹಾಗೂ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಅವಧಿ ವಿಸ್ತರಣೆ ಮಾಡುವಂತೆ ಸಲಹೆ ನೀಡಿದರು.
ನಮ್ಮ ತೀರ್ಮಾನ ಸರಿಯಾಗಿದೆ ಎಂದು ಎಸ್.ಎಂ.ಕೃಷ್ಣ ಅವರು ಹೇಳಿದ್ದಾರೆ. ನಮ್ಮ ನಿಲುವಿಗೆ ಅವರ ಬೆಂಬಲವಿದೆ. ರಾಜ್ಯಪಾಲರನ್ನು ಭೇಟಿಯಾಗಿ ಸದ್ಯದ ಬೆಳವಣಿಗೆಗಳ ಬಗ್ಗೆ ತಿಳಿಸಿ ವಿಶೇಷ ಅಧಿವೇಶನಕ್ಕೆ ಅನುಮತಿ ಕೋರಲಾಗಿದೆ ಎಂದು ಸಿಎಂ ತಿಳಿಸಿದರು.