ನವದೆಹಲಿ : ಆಪಲ್ ಕಂಪನಿಯ ಕಾರ್ಯನಿರ್ವಾಹಕ ಮುಖ್ಯಸ್ಥ ಟಿಮ್ ಕುಕ್ ಮುಂದಿನವಾರ ಭಾರತ ಪ್ರವಾಸ ಕೈಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
ಈ ವೇಳೆ ಭಾರತದಲ್ಲಿ ಆಪಲ್ ಐಪೋನ್ ಉತ್ಪಾದನೆ ಹಾಗೂ ಮಾರಾಟಕ್ಕೆ ಇರುವ ಅವಕಾಶಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದು ಭಾರತಕ್ಕೆ ಕುಕ್ ಅವರ ಮೊದಲ ಭೇಟಿಯಾಗಿದೆ. ಭಾರತದೊಂದಿಗೆ ಉತ್ತಮ ಸಂಬಂಧ ಸ್ಥಾಪಿಸುವ ಮೂಲಕ ಐಪೋನ್ ವ್ಯಾಪಾರಾಭಿವೃದ್ಧಿ ಮಾಡುವುದು ಕುಕ್ ಅವರ ಉದ್ದೇಶವಾಗಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಟಿಮ್ ಕುಕ್ ಅವರನ್ನು ಭೇಟಿ ಆಗಿದ್ದರು.
ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಭಾರತದಲ್ಲೇ ಐಪೋನ್ ಹಾಗೂ ಬಿಡಿಭಾಗಗಳ ಉತ್ಪಾದನೆಗೆ ಆಪಲ್ ಮುಂದಾಗಿದೆ. ಈ ಹಿಂದೆ ವ್ಯಾಪಾರದಲ್ಲಿ ಕುಸಿತ ಕಂಡಾಗ ಚೀನಾ ಪ್ರವಾಸ ಕೈಗೊಂಡು ಅಲ್ಲಿನ ಮಾರುಕಟ್ಟೆ ಅರಿತು ವ್ಯಾಪಾರಾಭಿವೃದ್ಧಿ ಕೈಗೊಂಡಿದ್ದರು.