ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಮೂರು ರಾಷ್ಟ್ರಗಳ ಪ್ರವಾಸ ಮಂಗಳವಾರ ರಾತ್ರಿಯಿಂದ ಆರಂಭವಾಗಲಿದೆ. ಕಳೆದ ವಾರ ಭೀಕರ ಉಗ್ರ ದಾಳಿಗೆ ತುತ್ತಾದ ಬೆಲ್ಜಿಂಯಂ ರಾಜಧಾನಿ ಬ್ರಸೆಲ್ಸ್ ಗೆ ಮೋದಿ ಮೊದಲು ಭೇಟಿ ನೀಡಲಿದ್ದಾರೆ.
ಬೆಲ್ಜಿಯಂನಲ್ಲಿ ಭಾರತ-ಯುರೋಪ್ ಒಕ್ಕೂಟ ಶೃಂಗಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಮೈಕೆಲ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬೆಲ್ಜಿಯಂ ಹಾಗೂ ಭಾರತದ ನಡುವೆ ರಕ್ಷಣಾ ಪಾಲುದಾರಿಕೆಯನ್ನು ಹೆಚ್ಚಿಸುವ ಉದ್ದೇಶ ಹಾಗೂ ಉಭಯ ದೇಶಗಳ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಉದ್ದೇಶವನ್ನು ಈ ಶೃಂಗಸಭೆ ಹೊಂದಿದೆ. ಅಲ್ಲದೇ ಪ್ರಧಾನಿ ಮೋದಿ ಪ್ರಮುಖ ಉದ್ಯಮಿಗಳು, ವಜ್ರವ್ಯಾಪಾರಿಗಳ ನಿಯೋಗವನ್ನು ಭೇಟಿ ಮಾಡಲಿದ್ದಾರೆ. ಜೊತೆಗೆ ಬೆಲ್ಜಿಯಂನ ಭಾರತೀಯ ಸಮುದಾಯದ ಉದ್ದೇಶಿಸಿ ಮಾತನಾಡಲಿದ್ದಾರೆ.
ಬಳಿಕ ಮಾರ್ಚ್ 31 ಹಾಗೂ ಏಪ್ರಿಲ್ 1ರಂದು ಮೋದಿ ಅವರು ವಾಷಿಂಗ್ಟನ್ನಲ್ಲಿ ನಡೆಯಲಿರುವ 4ನೇ ಪರಮಾಣು ಭದ್ರತಾ ಶೃಂಗಸಭೆ (ಎನ್ಎಸ್ಎಸ್)ಯಲ್ಲಿ ಭಾಗಿಯಾಗಲಿದ್ದಾರೆ. ಇಲ್ಲಿ ಪರಮಾಣು ಭದ್ರತೆಗೆ ಸಂಬಂಧಿಸಿದಂತೆ ಪ್ರಧಾನಿಯವರು ಕೆಲವು ನಿರ್ದಿಷ್ಟ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ.
ಈ ಶೃಂಗಸಭೆಯಲ್ಲಿ ಭಾರತವು ಪರಮಾಣು ಭದ್ರತೆಗೆ ಸಂಬಂಧಿಸಿದ ರಾಷ್ಟ್ರೀಯ ಪ್ರಗತಿ ವರದಿಯನ್ನು ಮಂಡಿಸಲಿದೆ. ಪರಮಾಣು ಭಯೋತ್ಪಾದನೆಯನ್ನು ಹತ್ತಿಕ್ಕುವ ಅಂಶಗಳನ್ನು ಈ ವರದಿ ಒಳಗೊಂಡಿರುವ ನಿರೀಕ್ಷೆಯಿದೆ.
ವಾಷಿಂಗ್ಟನ್ ನಿಂದ ಪ್ರಧಾನಿ ಮೋದಿ ಏಪ್ರಿಲ್ 2ರಂದು ಸೌದಿ ಅರೇಬಿಯಾ ರಾಜಧಾನಿ ರಿಯಾದ್ಗೆ ಎರಡು ದಿನಗಳ ಭೇಟಿಗಾಗಿ ತೆರಳಲಿದ್ದಾರೆ. ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರ ಆಹ್ವಾನದ ಮೇರೆಗೆ ಈ ಪ್ರವಾಸ ಕೈಗೊಳ್ಳಲಿದ್ದಾರೆ.