ಬ್ರಸೆಲ್ಸ್ : ಭಯೋತ್ಪಾದನೆ ಪಿಡುಗನ್ನು ಹೋಗಲಾಡಿಸಬೇಕೆಂದರೆ ಭಯೋತ್ಪಾದನೆ ವಿರುದ್ಧ ಎಲ್ಲಾ ರಾಷ್ಟ್ರಗಳು ಸಾಂಘಿಕವಾಗಿ ಹೋರಟ ನಡೆಸಬೇಕಿದೆ ಎಂದು ಪ್ರಧಾಣನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
13ನೇ ಭಾರತ-ಐರೋಪ್ಯ ಒಕ್ಕೂಟ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಬ್ರಸೆಲ್ಸ್ ಗೆ ಭೇಟಿ ನೀಡಿರುವ ಅವರು, ಈ ಸಂದರ್ಭದಲ್ಲಿ ಬ್ರಸೆಲ್ ಮೇಲಿನ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸ್ಮಾರಕಕ್ಕೆ ಪುಷ್ಟ ಗುಚ್ಛ ಇರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಭೋಜನಕೂಟ ಸಭೆಯಲ್ಲಿ ಮಾತನಾಡಿರುವ ಅವರು, ಭಾರತ ಭಯೋತ್ಪಾದನೆ ವಿರುದ್ಧ ಕಳೆದ 40 ವರ್ಷಗಳಿಂದಲೂ ಹೋರಾಟ ನಡೆಸಿಕೊಂಡು ಬಂದಿದೆ. ಇಂದು ವಿಶ್ವದಲ್ಲಿ ಭಯೋತ್ಪಾದನೆಯನ್ನು ಹೋಗಲಾಡಿಸಬೇಕಾದರೆ ಎಲ್ಲಾ ರಾಷ್ಟ್ರಗಳು ಒಗ್ಗೂಡಿ ಸಾಂಘಿಕವಾಗಿ ಹೋರಾಟ ನಡೆಸಬೇಕಿದೆ ಎಂದು ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಅಲ್ಲದೆಯೇ ಇನ್ನಿತರೆ ಕ್ಷೇತ್ರಗಳಲ್ಲೂ ಭಾರತ ಸಾಕಷ್ಟು ಅವಕಾಶನ್ನು ನೀಡುತ್ತಿದೆ. ಭಾರತ ಬಂದರು ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ಬೆಲ್ಜಿಯಂನೊಂದಿಗೆ ನಮ್ಮ ರಕ್ತಸಂಬಂಧವಿದೆ. 100 ವರ್ಷದ ಹಿಂದೆ ಭಾರತದ 130,000 ಯೋಧರು ಬೆಲ್ಜಿಯಂನಲ್ಲಿ ಹೋರಾಡಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆಂದರು.
ಬೆಲ್ಜಿಯಂನಲ್ಲಿರುವ ಭಾರತೀಯ ಮೂಲದ ವಜ್ರಾಭರಣ ವ್ಯಾಪಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಮೋದಿ, ಜೊತೆಗೆ ಬೆಲ್ಜಿಯಂನ ಉದ್ಯಮಿಗಳ ಭೇಟಿ ಮಾಡಿ ಭಾರತದಲ್ಲಿ ಹೂಡಿಕೆ ಮಾಡುವಂತೆ ಆಮಂತ್ರಿಸಿದರು.
ಅಲ್ಲದೇ ಉತ್ತರಾಖಂಡದ ನೈನಿತಾಲ್ನಲ್ಲಿ ಸ್ಥಾಪಿಸಲಾಗಿರುವ ಏಷ್ಯಾದ ಅತಿ ದೊಡ್ಡ, ಬೆಲ್ಜಿಯಂ ಸಹಯೋಗದಲ್ಲಿ ನಿರ್ಮಿಸಲಾದ ದೂರದರ್ಶಕವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬೆಲ್ಜಿಯಂನ ಪ್ರಧಾನಿ ಚಾರ್ಲ್ಸ್ ಮೈಕೆಲ್ ಅವರು ಜಂಟಿಯಾಗಿ ರಿಮೋಟ್ ಮೂಲಕ ಲೋಕಾರ್ಪಣೆಗೊಳಿಸಿದ್ದಾರೆ.