ಬೆಂಗಳೂರು : ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಭಾನುವಾರ ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ಒಟ್ಟು 20 ಕ್ಷೇತ್ರಗಳ 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇ. 99.61ರಷ್ಟು ಮತದಾನವಾಗಿದೆ. ಕೋಲಾರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ. 99.93ರಷ್ಟು ಮತದಾನವಾದರೆ, ಬೆಳಗಾವಿಯಲ್ಲಿ ಅತಿ ಕಡಿಮೆ ಅಂದರೆ ಶೇ. 99.01ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಈ ಚುನಾವಣೆಯಲ್ಲಿ ಶಾಸಕರು, ಸಂಸದರು, ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತ್ರಾಜ್ ಸ್ಥಳೀಯ ಸಂಸ್ಥೆಗಳ ಒಟ್ಟು 1,06,956 ಮತದಾರರ ಪೈಕಿ 1,06,587 ಮಂದಿ ಮತದಾನ ಮಾಡಿದ್ದಾರೆ. ಚುನಾವಣೆ ಬಹಿಷ್ಕರಿಸಿರುವ ಧಾರವಾಡ ಜಿಲ್ಲೆ ನವಲಗುಂದ ತಾಲೂಕು ಆರೇಕುರಹಟ್ಟಿ ಗ್ರಾಮ ಪಂಚಾಯತ್ನ 8 ಸದಸ್ಯರು ಸೇರಿದಂತೆ 369 ಮಂದಿ ಮತದಾನದಿಂದ ದೂರ ಉಳಿದಿದ್ದರು.
ಇದು ಗೌಪ್ಯ ಮತದಾನವಾಗಿದ್ದರೂ ಕೆಲವರು ಮತಪತ್ರಗಳನ್ನು ಬಹಿರಂಗವಾಗಿ ಪ್ರದರ್ಶಿಸಿದ್ದು, ಮತದಾನದ ಬಳಿಕ ತಾವು ಯಾವ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂಬುದನ್ನು ಘೋಷಿಸಿದ್ದು, ಇಬ್ಬರು ಸಚಿವರು ಮತ್ತು ಒಬ್ಬ ಅಭ್ಯರ್ಥಿಯ ಮತಗಟ್ಟೆ ನಿಗದಿ ಕುರಿತಂತೆ ಆದ ಗೊಂದಲ, ಒಂದೆಡೆ ಮತದಾನ ಬಹಿಷ್ಕಾರ ಇಂತಹ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಒಟ್ಟಾರೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ.
ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಡಿ. 30 ರಂದು ಬೆಂಗಳೂರಿನ 2 ಕೇಂದ್ರಗಳು ಸೇರಿದಂತೆ ಒಟ್ಟು 20 ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ.
ಬುಧವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಎಣಿಕೆ ನಡೆಯುವುದರಿಂದ ಸಂಪೂರ್ಣ ಫಲಿತಾಂಶ ಹೊರಬೀಳುವುದು ರಾತ್ರಿಯಾಗಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ಕುಮಾರ್ ಝಾ ಹೇಳಿದ್ದಾರೆ.