ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಶಾಂತಿಯುತ ಹೋರಾಟ ನಡೆಸುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ಜಲಾನಯನ ಭಾಗದಲ್ಲಿ ಎರಡು ಬೆಳೆ ಬೆಳೆಯಲು ಮತ್ತು ಬೆಂಗಳೂರಿಗೆ ಕುಡಿಯುವ ನೀರು ಕೊಡಲು ಕೂಡ ಕಾವೇರಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಅವಕಾಶ ನೀಡಿಲ್ಲ ಎಂದರು.
ತಮಿಳುನಾಡಿನಲ್ಲಿ ಮೂರು ಬೆಳೆ ಬೆಳೆಯಲು ಅವಕಾಶ ನೀಡಿ ಕುಡಿಯಲು ನೀರಿಲ್ಲ ಎಂಬ ತೀರ್ಪು ಬರೆದವರು ನ್ಯಾಯಾಧೀಶರೇ ಎಂದು ಪ್ರಶ್ನಿಸಿದ ಗೌಡರು, ತಮಿಳುನಾಡು ಮುಖ್ಯಮಂತ್ರಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿರುವುದು ಗಮನಕ್ಕೆ ಬಂದಿದೆ. ಆಕ್ರೋಶ ಭರಿತ ಪ್ರತಿಭಟನೆಯಿಂದ ಯಾವ ಪ್ರಯೋಜನವಿಲ್ಲ. ಶಾಂತಿಯುತ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಲ್ಲಿ ವಾದ ಮಾಡುತ್ತಿರುವ ಹಿರಿಯ ವಕೀಲ ನಾರಿಮನ್ ಅವರನ್ನು ಬದಲಾವಣೆ ಮಾಡಬೇಕು ಎಂಬ ಒತ್ತಾಯಕ್ಕೆಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ವಕೀಲರನ್ನು ಬದಲಿಸಿದರೆ ಪ್ರಯೋಜನವಿಲ್ಲ.ನಾರಿಮನ್ ಅವರಿಗೆ ಕಾವೇರಿ ನದಿ ವಿವಾದದ ಪೂರ್ಣ ಇತಿಹಾಸ ಗೊತ್ತಿದೆ. ಹೊಸಬರನ್ನು ತಂದರೆ ಮತ್ತೆ ಅವರು ಇತಿಹಾಸವನ್ನು ತಿಳಿದುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ನುರಿತ ವಕೀಲರ ಸಂಖ್ಯೆ ಕಡಿಮೆ ಇದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ 10 ದಿನಗಳ ಕಾಲ ನಿತ್ಯ 15 ಕ್ಯೂಸೆಕ್ಸ್ ನೀರು ಬಿಡಬೇಕೆಂಬ ನಿರ್ದೇಶನ ನೀಡಿದೆ. ಒಂದು ವೇಳೆ ಕರ್ನಾಟಕ ಇನ್ನು ಮೂರು ದಿನಗಳಲ್ಲಿ ನೀರು ಬಿಡದಿದ್ದರೆ ಕಾವೇರಿ ಸೂಪರ್‍ವೈಸರ್ ಕಮಿಟಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು, ಕನ್ನಡ ಪರಸಂಘಟನೆ, ಸಂಘ-ಸಂಸ್ಥೆಗಳು ಶಾಂತಿಯುತ ಹೋರಾಟ ಮಾಡಿ ಐಕ್ಯತೆ ಪ್ರದರ್ಶಿಸಬೇಕೆಂದರು.