ಅಸ್ತಾನ : ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಹಾಗೂ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಭಾಗವಹಿಸಲು ಬುಧವಾರ ರಷ್ಯಾದ ಉಫಾ ತಲುಪಿದ್ದಾರೆ. ಉಫಾಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಪಾರಂಪರಿಕ ರೀತಿಯಲ್ಲಿ ಸ್ವಾಗತಿಸಲಾಯಿತು.
ಇದಕ್ಕೂ ಮೊದಲು ಜು. 6-8 ರ ತನಕ ಉಜ್ಬೇಕಿಸ್ತಾನ್ ಮತ್ತು ಕಝಕಿಸ್ತಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಜು 8-10 ರವರೆಗೆ ಉಫಾದಲ್ಲಿ ನಡೆಯಲಿರುವ ಬ್ರಿಕ್ಸ್ ಹಾಗೂ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಶಾಂಘೈ ಸಹಕಾರ ಸಂಘಟನೆಯಲ್ಲಿ ಪ್ರಸ್ತುತ 6 ದೇಶಗಳು ಸದಸ್ಯತ್ವ ಹೊಂದಿವೆ. ಅವುಗಳಲ್ಲಿ ರಷ್ಯಾ, ಚೀನಾ, ಕಝಕ್ ಸ್ತಾನ್,ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತಜಿಕಿಸ್ತಾನ್ ಸೇರಿವೆ. ಪ್ರಧಾನಿ ಮೋದಿ ಭೇಟಿಯ ಸಂದರ್ಭದಲ್ಲಿ ಭಾರತವೂ ಈ ಗುಂಪಿನ ಸದಸ್ಯತ್ವ ಪಡೆಯುವ ಸಂಭವವಿದೆ. ಇದು ಪ್ರಧಾನಿ ಪ್ರವಾಸದ ಪ್ರಮುಖ ಅಂಶ ಎನ್ನಲಾಗಿದೆ. ಸದ್ಯಕ್ಕೆ ಭಾರತ ಕೇವಲ 'ವೀಕ್ಷಕ' ದೇಶವಾಗಿ ಭಾಗವಹಿಸುತ್ತಿದೆ.
ಕಳೆದ ವರ್ಷ ಬ್ರಜಿಲ್ ನಲ್ಲಿ ನಡೆದ ಬ್ರಿಕ್ಸ್ ಶೃಂಗ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ ಈಗಾಗಲೇ ಸ್ಥಾಪನೆಯಾಗಿದ್ದು, ಸದಸ್ಯ ದೇಶಗಳಿಗೆ ಸ್ಥಳೀಯ ಕರೆನ್ಸಿಯಲ್ಲಿ ಸಾಲ ಸೌಲಭ್ಯ ನೀಡುವ ಬಗ್ಗೆಯೂ ಸಭೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಮೊದಲ 6 ವರ್ಷಗಳಿಗೆ ಭಾರತ ಬ್ರಿಕ್ಸ್ ಬ್ಯಾಂಕ್ ನ ಅಧ್ಯಕ್ಷ ಸ್ಥಾನದ ಹಕ್ಕು ಪಡೆದಿದ್ದು, ಐಸಿಐಸಿಐ ಬ್ಯಾಂಕ್ ನ ಮಾಜಿ ಅಧ್ಯಕ್ಷ ಕೆ.ವಿ.ಕಾಮತ್ ಅವರು ಇದರ ಪ್ರಥಮ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.