ಚೆನ್ನೈ : ತಮಿಳುನಾಡಿನ ಆರ್.ಕೆ.ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಭಾರಿ ಮುನ್ನಡೆ ಸಾಧಿಸಿದ್ದಾರೆ.
ಚೆನ್ನೈನ ರಾಣಿ ಮೇರಿ ಕಾಲೇಜ್ ನಲ್ಲಿ ಬೆಳಗ್ಗೆಯಿಂದ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಎಐಎಡಿಎಂ ಅಭ್ಯರ್ಥಿ ಜಯಲಲಿತಾ ಅವರು 38,406 ಮತಗಳನ್ನು ಪಡೆದು ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪ್ರತಿಸ್ಪರ್ಧಿ ಸಿಪಿಎಂನ ಅಭ್ಯರ್ಥಿ ಸಿ.ಮಹೇಂದ್ರನ್ ಅವರು ಕೇವಲ 2809 ಮತಗಳನ್ನು ಪಡೆದು ತೀವ್ರ ಹಿನ್ನಡೆ ಅನುಭವಿಸಿದ್ದಾರೆ.
ನಿರೀಕ್ಷೆಯಂತೆ ತಮಿಳುನಾಡು ಸಿಎಂ ಭರ್ಜರಿ ಗೆಲುವಿನತ್ತ ದಾಪುಗಾಲಿಡುತ್ತಿದ್ದು, ಫಲಿತಾಂಶಕ್ಕೂ ಮುನ್ನವೇ ತಮಿಳುನಾಡಿನಾದ್ಯಂತ ಎಐಎಡಿಎಂಕೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ಕಳೆದ ಜೂನ್ 27ರಂದು ಆರ್.ಕೆ. ನಗರ ವಿಧಾನಸಭೆಗೆ ಉಪ ಚುನಾವಣೆ ನಡೆದಿತ್ತು. ಸಮಾಜ ಸೇವಕ ಟ್ರಾಫಿಕ್ ರಾಮಸ್ವಾಮಿ ಸೇರಿದಂತೆ 28 ಅಭ್ಯರ್ಥಿಗಳು ಕಣದಲ್ಲಿದ್ದರು.