ಬೆಂಗಳೂರು : ಲೋಕಾಯುಕ್ತ ಸಂಸ್ಥೆ ಅಧಿಕಾರಿಗಳೇ ಭಾಗಿಯಾಗಿರುವ ರು.1 ಕೋಟಿ ಲಂಚ ಆರೋಪದ ತನಿಖೆ ಮತ್ತೆ ಕಗ್ಗಂಟಾಗಿ ಪರಿಣಮಿಸಿದೆ. ಯಾರು ತನಿಖೆ ನಡೆಸಬೇಕೆಂಬುದನ್ನು ಸರ್ಕಾರವೇ ನಿರ್ಧರಿಸಲಿ ಎಂದು ಲೋಕಾಯುಕ್ತರು ಪತ್ರ ಬರೆದ ಬೆನ್ನಲ್ಲೇ, ಲೋಕಾಯುಕ್ತ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದು ನಮ್ಮ ವ್ಯಾಪ್ತಿಯಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಲೋಕಾಯುಕ್ತ ಸಂಸ್ಥೆ ಸ್ವಾಯತ್ತ ಸಂಸ್ಥೆ. ಅಲ್ಲಿನ ಪ್ರಕರಣವನ್ನು ತನಿಖೆಗೊಳಪಡಿಸುವುದು ಸರ್ಕಾರದ ಅಧಿಕಾರದ ವ್ಯಾಪ್ತಿಗೆ ಬರುವುದಿಲ್ಲ. ಅವರೇ ಸರಿಪಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು, ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ಪ್ರಕರಣದ ತನಿಖೆಯನ್ನು ಯಾರಿಗೆ ಬೇಕಾದರೂ ವಹಿಸುವ ಅಧಿಕಾರ ಲೋಕಾಯುಕ್ತರಿಗೆ ಇದೆ ಎಂದು ಹೇಳಿದ್ದಾರೆ.
ಸ್ವತಂತ್ರ ತನಿಖಾ ಸಂಸ್ಥೆ ಗೆ ವಹಿಸುವಂತೆ ಕೋರಿ ಲೋಕಾಯುಕ್ತ ನ್ಯಾ. ವೈ.ಭಾಸ್ಕರರಾವ್ ಅವರು ರಾಜ್ಯ ಸರ್ಕಾರಕ್ಕೆ ಭಾನುವಾರ ಪತ್ರ ಬರೆದಿದ್ದಾರೆ. ಲೋಕಾಯುಕ್ತ ಸಂಸ್ಥೆಯ ಘನತೆ, ಗೌರವ ಎತ್ತಿ ಹಿಡಿಯುವ ಉದ್ದೇಶದಿಂದ ಪಾರದರ್ಶಕ ಹಾಗೂ ಪ್ರಭಾವರಹಿತ ತನಿಖೆಯಾಗಬೇಕು ಎನ್ನುವ ಕಾರಣಕ್ಕೆ ಆರೋಪದ ಬಗೆಗಿನ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ನೀಡಬೇಕೆಂಬುದು ಲೋಕಾಯುಕ್ತರ ಬಯಕೆ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಲೋಕಾಯುಕ್ತ ರಿಜಿಸ್ಟ್ರಾರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಪ್ರಕರಣವನ್ನು ಸಿಸಿಬಿಗೆ ಒಪ್ಪಿಸಿದ್ದರ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿರುವುದು ಹಾಗೂ ಸಿಸಿಬಿ ತನಿಖೆಗೆ ನಿರಾಕರಿಸಿರುವ ಬೆನ್ನಲ್ಲೇ ಈಗ ಪ್ರಕರಣದ ತನಿಖೆ ಯಾರು ನಡೆಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.