ಬೆಳಗಾವಿ : ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗದಿರಲು ನಿರ್ಧರಿಸಿದ್ದಾರೆ. ಈ ಮೂಲಕ ಅವರ ರಾಜೀನಾಮೆ ವಾಪಸ್ ವಿಚಾರ ಇನ್ನಷ್ಟು ಕಗ್ಗಂಟಾದಂತಾಗಿದೆ.
ರಾಜೀನಾಮೆ ವಾಪಸ್ ಪಡೆಯಲು ಸತೀಶ್ ಜಾರಕಿಹೊಳಿ ಎರಡು ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಹಾಗೂ ತಮಗೆ ಪ್ರಮುಖ ಖಾತೆಯನ್ನು ನೀಡಬೇಕು. ತಮ್ಮ ಬೇಡಿಕೆ ಈಡೇರಿದರೆ ಮಾತ್ರ ಸಿಎಂ ಜತೆ ಚರ್ಚೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಜಾರಕಿಹೊಳಿ ಬದಲಾಗಿ ಬೆಳಗಾವಿ ಕಾಂಗ್ರೆಸ್ ಮುಖಂಡರು ಸಿಎಂ ಭೇಟಿಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಜೀನಾಮೆ ವಾಪಸ್ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಮಾತನಾಡಿ ಬೆಂಗಳೂರಿಗೆ ಬರುವಂತೆ ಆಹ್ವಾನಿಸಿದ್ದಾರೆ. ನಾಳೆ ಸಿಎಂ ಭೇಟಿ ಮಾಡುವುದಾಗಿ ಜಾರಕಿಹೊಳಿ ಜ.28ರಂದು ತಿಳಿಸಿದ್ದರು.
ಬೆಳಿಗ್ಗೆ ಬೆಳಗಾವಿಯಿಂದ ಬೆಂಗಳೂರಿಗೆ ಬರಲು ಟಿಕೆಟ್ ಕೂಡ ಬುಕ್ ಆಗಿದೆ ಎನ್ನಲಾಗಿತ್ತು. ಆದರೆ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸುತ್ತಿರುವ ಹಿನ್ನಲೆಯಲ್ಲಿ ವಿಮಾನ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡಿದ್ದು, ರಸ್ತೆ ಮಾರ್ಗವಾಗಿಯೇ ಬೆಂಗಳೂರಿಗೆ ಆಗಮಿಸಲಿದ್ದಾರೆ ಹೀಗಾಗಿ ಮಧ್ಯಾಹ್ನದ ಬಳಿಕ ಜಾರಕಿಹೊಳಿ ಬೆಂಗಳೂರಿಗೆ ಆಗಮಿಸುತ್ತಾರೆ ಎನ್ನಲಾಗಿತ್ತು. ಆದರೆ ಈಗ ಜಾರಕಿಹೊಳಿ ಸಿಎಂ ಭೇಟಿಯಾಗದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.