ನವದೆಹಲಿ : ನಕಲಿ ಕಾನೂನು ಪದವಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ದೆಹಲಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯದ ಪಾತ್ರ ಇಲ್ಲ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ತೋಮರ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ರಾಜನಾಥ್ ಸಿಂಗ್, ಪ್ರಕರಣದಲ್ಲಿ ಗೃಹ ಸಚಿವಾಲಯ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ, ಪೊಲೀಸರು ಪ್ರಕರಣದ ತನಿಖೆ ನಡೆಸಿ ಕಾನೂನು ಪ್ರಕಾರವೇ ಕ್ರಮ ತೆಗೆದುಕೊಂಡಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸ್ ಪಿಆರ್ಒ ಮಾಧ್ಯಮಕ್ಕೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ತೋಮರ್ ಅವರನ್ನು ದಿಢೀರ್ ಬಂಧಿಸಿರುವ ದೆಹಲಿ ಪೊಲೀಸ್ ಕ್ರಮದ ಬಗ್ಗೆ ಆಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ದೆಹಲಿ ಸರ್ಕಾರದ ಮೇಲೆ ಒತ್ತಡ ಹೇರುವ ಕುತಂತ್ರ ನಡೆಸಿದೆ ಎಂದು ಆರೋಪಿಸಿದೆ.