ನವದೆಹಲಿ : ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಕೊನೆಗೂ ಪೊಲೀಸರ ವಿಚಾರಣೆ ವೇಳೆ ತಮ್ಮ ಬಿಎಸ್ಸಿ ಪದವಿ ನಕಲಿ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಏತನ್ಮಧ್ಯೆ ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಜಿತೇಂದ್ರ ಸಿಂಗ್ ತೋಮರ್ ವಾಪಸ್ ಪಡೆದಿದ್ದಾರೆ. ನಕಲಿ ಪದವಿ ಪ್ರಮಾಣ ಪತ್ರವನ್ನು ಏಜೆಂಟ್ ರಿಂದ ಪಡೆದಿರುವುದಾಗಿ ತೋಮರ್ ತಿಳಿಸಿದ್ದಾರೆ.
ನಕಲಿ ಪದವಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಜಿತೇಂದ್ರ ಸಿಂಗ್ ತೋಮರ್ ಅವರನ್ನು ಜೂ.9ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ತೋಮರ್ ತಮ್ಮ ಬಂಧನವನ್ನು ಪ್ರಶ್ನಿಸಿ ಮತ್ತು ಜಾಮೀನು ನೀಡುವಂತೆ ಕೋರಿ ದೆಹಲಿ ಸಾಕೇತ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿರುವ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ, ಜೂನ್ 13ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಅಲ್ಲದೇ ಜಾಮೀನು ಅರ್ಜಿ ವಿಚಾರಣೆ ಜೂನ್ 16ಕ್ಕೆ ಮುಂದೂಡಲಾಗಿತ್ತು.