ಜಮ್ಮು : ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಹುರಿಯತ್ ನಾಯಕ ಸೈಯದ್ ಅಲಿ ಶಾ ಗೀಲಾನಿ ಪಾಸ್ ಪೋರ್ಟ್ ಪಡೆಯುವ ಸಲುವಾಗಿ ಪಾಸ್ ಪೋರ್ಟ್ ಅಧಿಕಾರಿಗಳ ಮುಂದೆ ಹಾಜರಾಗಿ ತಾನು ಭಾರತೀಯ ಎಂದು ಘೋಷಿಸಿಕೊಂಡಿದ್ದಾನೆ.
ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆಗಳನ್ನು ಪೂರೈಸಿ ಹೊರಬಂದೊಡನೆಯೇ ಮಾತನಾಅಡಿದ ಗಿಲಾನಿ, ಬೇರೆ ಉಪಾಯವಿಲ್ಲದೆ, ನಿಯಮಗಳಿಗೆ ಕಟ್ಟುಬಿದ್ದು ನಾನು ಭಾರತೀಯನೆಂದು ಘೋಷಿಸಿಕೊಂಡೆ ಎಂಬುದಾಗಿ ಹೇಳಿದ್ದಾನೆ.
ನಾನು ಜನ್ಮತಃ ಭಾರತೀಯನಲ್ಲ. ಆದರೆ ಪಾಸ್ ಪೋರ್ಟ್ ಪಡೆಯುವುದಕ್ಕೆ ಬೇರೆ ಮಾರ್ಗವಿಲ್ಲದೆ ನಾನು ನಿಯಮಗಳಿಗೆ ಕಟ್ಟುಬಿದ್ದು ಭಾರತೀಯನೆಂದು ಘೋಷಿಸಬೇಕಾಯಿತು ಎಂದು ಹೇಳಿದ್ದಾನೆ. ಪಾಸ್ಪೋರ್ಟ್ ಅರ್ಜಿಯಲ್ಲಿ ರಾಷ್ಟ್ರೀಯತೆಯ ಕಲಮಿನಲ್ಲಿ "ಭಾರತೀಯ' ಎಂದು ಬರೆದ ಗೀಲಾನಿ, ಪ್ರತಿಯೋರ್ವ ಕಾಶ್ಮೀರಿ ಪ್ರಜೆಗೆ ಭಾರತೀಯ ಪಾಸ್ ಪೋರ್ಟ್ ಆಧಾರದಲ್ಲಿ ವಿದೇಶಗಳಿಗೆ ಪ್ರಯಾಣಿಸುವುದು ಅನಿವಾರ್ಯ ಎಂದು ತಿಳಿಸಿದ್ದಾನೆ.
ಭಾರತೀಯ ಪಾಸ್ ಪೋರ್ಟ್ಗೆ ಅರ್ಜಿ ಹಾಕಿದ್ದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿಇಲ್ಲಿನ ಪ್ರಾದೇಶಿಕ ಪಾಸ್ ಪೋರ್ಟ್ ಕಾರ್ಯಾಲಯದಲ್ಲಿ ಹಾಜರಾಗಿ ತನ್ನ ಬಯೋಮೆಟ್ರಿಕ್ ವಿವರಗಳ ರೂಪದಲ್ಲಿ ತನ್ನ ಬೆರಳಚ್ಚು ಹಾಗೂ ಕಣ್ಣಗೊಂಬೆಯ ಸ್ಕ್ಯಾನಿಂಗ್ ಮಾಡಿಸಿಕೊಂಡು, ತಾನು ಭಾರತೀಯನೆಂಬ ಘೋಷಣೆಗೆ ಸಹಿಹಾಕಿ, ಆವಶ್ಯಕ ಪ್ರಕ್ರಿಯೆಗಳನ್ನು ಪೂರೈಸಿದ ಎಂದು ಪಾಸ್ ಪೋರ್ಟ್ ಕಾರ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.