ಬೀಜಿಂಗ್ : ಭೀಕರ ಮಳೆ, ಬಿರುಗಾಳಿ ಹೊಡೆತಕ್ಕೆ ಸಿಲುಕಿದ ಚೀನಾದ ಪ್ರಯಾಣಿಕರ ಹಡಗು ಮುಳುಗಿ 400ಕ್ಕೂ ಅಧಿಕ ಮಂದಿ ಜಲಸಮಾಧಿಯಾಗಿರುವ ಘಟನೆ ಚೀನಾದ ದಕ್ಷಿಣ ಹುಬೈ ಪ್ರಾಂತ್ಯದ ಯಾಂಗ್ ಝೆ ನದಿಯಲ್ಲಿ ನಡೆದಿದೆ.
ಈಸ್ಟರ್ನ್ ಸ್ಟಾರ್ ಎಂಬ ಚೀನಾ ಹಡಗು 458 ಮಂದಿಯನ್ನು ನಾಜಿಂಗ್ ನಗರದಿಂದ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಭಾರೀ ಚಂಡಮಾರುತ, ಮಳೆಯ ಹೊಡೆತಕ್ಕೆ ಸಿಲುಕಿ ಮುಳುಗಿರುವುದಾಗಿ ಕ್ಸಿನ್ ಹುವಾ ವರದಿ ಹೇಳಿದೆ.
ಘಟನೆಯಲ್ಲಿ ಹಡಗಿನ ಕ್ಯಾಪ್ಟನ್ ಸೇರಿದಂತೆ 12 ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದ ಪ್ರಯಾಣಿಕರು ಕಣ್ಮರೆಯಾಗಿದ್ದಾರೆ. ಬಹುತೇಕ ಅವರೆಲ್ಲಾ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ. ಹಡಗಿನಲ್ಲಿ 405 ಮಂದಿ ಚೀನಿ ಪ್ರಯಾಣಿಕರು, 5 ಮಂದಿ ಟ್ರಾವೆಲ್ ಏಜೆನ್ಸಿ ಉದ್ಯೋಗಿಗಳು ಮತ್ತು 47 ಮಂದಿ ಸಿಬ್ಬಂದಿಗಳಿದ್ದರು. ಇದರಲ್ಲಿ 97 ಮಂದಿ ಪ್ರವಾಸಿಗರಿದ್ದರು. ಶಾಂಘೈ ಕ್ಸಿಹಿ ಟ್ರಾವೆಲ್ ಏಜೆನ್ಸಿ ಈ ಪ್ರವಾಸವನ್ನು ಆಯೋಜಿಸಿತ್ತು ಎಂದು ತಿಳಿದುಬಂದಿದೆ.
ಪ್ರತಿಕೂಲ ಹವಾಮಾನದ ನಡುವೆಯೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಚೀನಾ ಅಧ್ಯಕ್ಷ ಕ್ಷಿ ಜಿಂಗ್ ಪಿಂಗ್ ಸೂಚನೆ ನೀಡಿದ್ದಾರೆ.