ನವದೆಹಲಿ : ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರದ ತೀವ್ರ ಆಕ್ಷೇಪದ ನಡುವೆಯೇ, ದೆಹಲಿ ಸರ್ಕಾರದ ಹಂಗಾಮಿ ಮುಖ್ಯ ಕಾರ್ಯದರ್ಶಿಯನ್ನಾಗಿ, ಹಿರಿಯ ಐಎಎಸ್ ಅಧಿಕಾರಿ ಶಕುಂತಲಾ ಗಾಮ್ಲಿನ್ ಅವರನ್ನು ನೇಮಿಸಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಆದೇಶ ಹೊರಡಿಸಿದ್ದಾರೆ.
ನಜೀಬ್ ಜಂಗ್ ನಡೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಆಪ್ ಸರ್ಕಾರ, ಶಕುಂತಲಾ ಅವರು ದೆಹಲಿಗೆ ವಿದ್ಯುತ್ ಪೂರೈಕೆ ಮಾಡುವ ಕಂಪನಿಗಳ ಜೊತೆ ನಂಟು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಅವರ ಪರವಾಗಿ ಲಾಬಿ ನಡೆಸುತ್ತಾರೆ. ಹೀಗಿರುವಾಗ ಮುಖ್ಯಮಂತ್ರಿ ಗಮನಕ್ಕೆ ತರದೇ, ಸರ್ಕಾರದ ಆದೇಶಕ್ಕೂ ಕಾಯದೆ ಶಕುಂತಲಾ ಅವರನ್ನು ನೇಮಿಸಿರುವುದು ಅಸಂವಿಧಾನಿಕ, ಲೆಫ್ಟಿನಂಟ್ ಗವರ್ನರ್ ಗೆ ಈ ಅಧಿಕಾರ ಇಲ್ಲ ಎಂದು ಕಿಡಿಕಾರಿದೆ.
ಇದರೊಂದಿಗೆ ನಜೀಬ್ ಜಂಗ್ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವಿನ ತಿಕ್ಕಾಟ ಮತ್ತಷ್ಟು ಉಲ್ಬಣಿಸಿದೆ.
ಆದರೆ ಹಾಲಿ ಮುಖ್ಯ ಕಾರ್ಯದರ್ಶಿ ಕೆ.ಕೆ.ಶರ್ಮಾ ವೈಯಕ್ತಿಕ ಕೆಲಸದ ಮೇಲೆ ತುರ್ತಾಗಿ ಅಮೆರಿಕಕ್ಕೆ ತೆರಳಿದ ಹಿನ್ನೆಲೆಯಲ್ಲಿ ಶಕುಂತಲಾ ಅವರನ್ನು ಅವರ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಜಂಗ್ ಅವರ ಕಚೇರಿ ಹೇಳಿಕೆ ನೀಡಿತ್ತು.
ಆದರೆ ನೇಮಕಕ್ಕೂ ಕೆಲ ಗಂಟೆಗಳ ಮುನ್ನ ಜಂಗ್ ಅವರಿಗೆ ಪತ್ರ ಬರೆದಿದ್ದ ಶಕುಂತಲಾ "ನಾನು ಅಧಿಕಾರ ವಹಿಸಿಕೊಳ್ಳದಂತೆ ನನಗೆ ಮುಖ್ಯಮಂತ್ರಿ ಕಚೇರಿಯಿಂದ ಒತ್ತಡವಿದೆ' ಎಂದು ಮಾಹಿತಿ ನೀಡಿದ್ದರು.