ಬೆಂಗಳೂರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳನ್ನು ನಿರ್ವಹಿಸಲು ಇತಿಹಾಸದ ಹಿನ್ನೆಲೆಯುಳ್ಳ ತಜ್ಞರ ಸಮಿತಿ ನೇಮಕ ಮಾಡಿ, ತಜ್ಞರ ಸಲಹೆ ಪಡೆದು ಮುಂದಿನ ಒಂದು ತಿಂಗಳೊಳಗೆ ಕಾರ್ಯಸೂಚಿ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನವನ್ನು ರಾಜ್ಯ ಸರ್ಕಾರವು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಎಂದು ಮಾರ್ಪಡಿಸಿದ ನಂತರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಎಂ, ಈ ಕ್ಷೇತ್ರದ ರಸ್ತೆ ಕಾಮಗಾರಿಗಳನ್ನು ಬರುವ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಅಗತ್ಯವಿರುವ ಜಮೀನನ್ನು ಕೂಡಲೇ ಪ್ರತಿಷ್ಠಾನಕ್ಕೆ ಹಸ್ತಾಂತರಿಸಬೇಕು. ಪ್ರಾಧಿಕಾರದಲ್ಲಿರುವ 12 ಕೋಟಿ ರೂ ವೆಚ್ಚದ ಕಾಮಗಾರಿಗಳ ರೂಪು-ರೇಷೆಗಳನ್ನು ಕೂಡಲೇ ಸಿದ್ಧಗೊಳಿಸಬೇಕು. ಪ್ರಾಧಿಕಾರಕ್ಕೆ ಪ್ರತ್ಯೇಕ ಆಯುಕ್ತರು ಹಾಗೂ ಸಿಬ್ಬಂದಿಯ ನೇಮಕಾತಿಗೆ ಸೂಕ್ತ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಅವರು ಆದೇಶಿಸಿದರು.
ತಜ್ಞರ ಸಮಿತಿಯ ನೀಡುವ ಶಿಫಾರಸ್ಸಿನಂತೆ ಸರ್ವಸಮ್ಮತ ರೀತಿಯಲ್ಲಿ ಸಮುದಾಯ ಭವನ, ಶೌರ್ಯ ಅಕಾಡೆಮಿ, ಗ್ರಂಥಾಲಯ, ಸೈನಿಕ ಶಾಲೆ, ಯಾತ್ರಿ ನಿವಾಸಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಲಹೆ ನೀಡಿದರು.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ರಾಜ್ಯ ವಿಧಾನ ಪರಿಷತ್ ಸದಸ್ಯ ಹೆಚ್. ಎಂ. ರೇವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ. ಎ. ದಯಾನಂದ, ಡಿ ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ. ಆರ್. ಏಕಾಂತಪ್ಪ, ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಂ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.