ಬೀಜಿಂಗ್ : ಭಾರತ ಮತ್ತು ಚೀನಾ 10 ಬಿಲಿಯನ್ ಡಾಲರ್ ಮೌಲ್ಯದ 24 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ.
ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಪ್ರಧಾನಿ ಲೀ ಕೆಕಿಯಾಂಗ್ ಬೀಜಿಂಗ್ ನಲ್ಲಿರುವ ಗ್ರೇಟ್ ಹಾಲ್ ಆಫ್ ಪೀಪಲ್ ನ ಸೌತ್ ಚೇಂಬರ್ ನಲ್ಲಿ ಮಹತ್ವದ ಮಾತುಕತೆ ನಡೆಸಿದ ನಂತರ ಈ ಒಪ್ಪಂದಗಳಿಗೆ ಸಹಿ ಹಾಕಿದರು.
ಉಭಯ ದೇಶಗಳ ನಡುವೆ ರೈಲ್ವೆ, ಶಿಕ್ಷಣ, ಬಾಹ್ಯಾಕಾಶ, ವಿಜ್ಞಾನ, ಪ್ರವಾಸೋದ್ಯಮ ಸೇರಿದಂತೆ ವಿವಿಧ ವಲಯಗಳಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ 24 ದ್ವಿಪಕ್ಷೀಯ ಒಪ್ಪಂದಗಳು ಏರ್ಪಟ್ಟಿವೆ.
ನಮ್ಮ ಸರಕಾರ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ತಾವು ಚೀನಾಕ್ಕೆ ಭೇಟಿ ನೀಡಿರುವುದು ಮಹತ್ವಪೂರ್ಣದ್ದಾಗಿದೆ. ಇತ್ತೀಚೆಗಿನ ದಶಕಗಳಲ್ಲಿ ನಮ್ಮ ಸಾಂಸ್ಕೃತಿಕ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲು ಇದು ಸಹಕಾರಿಯಾಗಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು.
ಅಲ್ಲದೇ, ನಮ್ಮ ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಚೀನಾ ಕೆಲವೊಂದು ವಿಷಯಗಳ ಬಗ್ಗೆ ಮರು ಚಿಂತನೆ ನಡೆಸಬೇಕಾಗಿದೆ ಎಂದು ಮೋದಿ ಸಲಹೆ ನೀಡಿದರು.