ಲಂಡನ್ : 'ಬ್ರಿಟನ್' ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಮೂಲದ 10ಸದಸ್ಯರು ಸಂಸದರಾಗಿ ಆಯ್ಕೆಗೊಂಡಿದ್ದಾರೆ. ಈ ಮೂಲಕ ಬ್ರಿಟನ್ ಸಂಸತ್ ನಲ್ಲಿ ಭಾರತೀಯ ಮೂಲದ ಸಂಸದರ ಸಂಖ್ಯೆ ಹೆಚ್ಚಾಗಿದೆ.
ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಶಿ ಸುನಾಕ್ ಸೇರಿ 10 ಮಂದಿ ಭಾರತೀಯ ಮೂಲದವರು ಬ್ರಿಟನ್ ಸಂಸತ್ತಿಗೆ ಆಯ್ಕೆಯಾಗಿ ದಾಖಲೆ ನಿರ್ವಿುಸಿದ್ದಾರೆ. ಉತ್ತರ ಇಂಗ್ಲೆಂಡ್ನ ರಿಚ್ಮಂಡ್ (ಯಾರ್ಕ್ಸ್) ಕ್ಷೇತ್ರದಿಂದ ಸ್ಪರ್ಧಿಸಿದ್ದ ರಿಶಿ, ಪ್ರಥಮ ಬಾರಿಗೆ ಹೌಸ್ ಆಫ್ ಕಾಮನ್ಸ್ ಗೆ ಆಯ್ಕೆಯಾಗಿದ್ದಾರೆ.
ವೀರೇಂದ್ರ ಶರ್ವ ಈಲಿಂಗ್ ಸೌತಲ್ ಕ್ಷೇತ್ರದಿಂದ ಜಯಗಳಿಸಿದ್ದರೆ, ಲೇಬರ್ ಪಕ್ಷದ ಹಿರಿಯ ನಾಯಕ ಹಾಗೂ ದೀರ್ಘಾವಧಿಗೆ ಸಂಸದರಾಗಿ ಸೇವೆ ಸಲ್ಲಿಸಿರುವ ಕೀತ್ ವಾಜ್ ಪೂರ್ವ ಲೀಸೆಸ್ಟರ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಲೇಬರ್ ಪಕ್ಷದ ನಾಯಕಿಯರಾದ ವಾಲೆರಿ ವಾಜ್ ದಕ್ಷಿಣ ವಾಲ್ಸಾಲ್ ಕ್ಷೇತ್ರದಿಂದ ಹಾಗೂ ಸೀಮಾ ಮಲ್ಹೋತ್ರಾ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಇನ್ನು ಪ್ರಧಾನಿ ಕೆಮೆರಾನ್ ಆಪ್ತ ಬಳಗದಲ್ಲಿರುವ ಪ್ರೀತಿ ಪಟೇಲ್ ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. 2010ರಲ್ಲಿ 8 ಮಂದಿ ಭಾರತೀಯ ಮೂಲದವರು ಸಂಸತ್ ಪ್ರವೇಶಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.
ಬ್ರಿಟನ್ ನಲ್ಲಿ ಭಾರತೀಯ ಮೂಲದ ಸಂಸದರ ಸಂಖ್ಯೆ 8ರಿಂದ 10ಕ್ಕೆ ಏರಿಕೆಯಾಗಿದ್ದು ಹೊಸ ದಾಖಲೆ ನಿರ್ಮಾಣವಾಗಿದೆ.