ಲಂಡನ್ : 'ಬ್ರಿಟನ್' ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಡೇವಿಡ್ ಕ್ಯಾಮರೂನ್ ನೇತೃತ್ವದ ಪಕ್ಷ ಮತ್ತೊಮ್ಮೆ ಬಹುಮತ ಪಡೆದಿದೆ. ಈ ಮೂಲಕ ಡೇವಿಡ್ ಕ್ಯಾಮರೂನ್ ಮತ್ತೊಮ್ಮೆ ಬ್ರಿಟನ್ ಪ್ರಧಾನಿಯಾಗಲಿದ್ದಾರೆ.
ಬ್ರಿಟನ್ ಸಂಸತ್ ನ 650 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶದಲ್ಲಿ ಪ್ರಧಾನಿ ಕ್ಯಾಮರೂನ್ ಪಕ್ಷ 329 ಸ್ಥಾನಗಳನ್ನು ಪಡೆದಿದೆ. ಬ್ರಿಟನ್ ನಲ್ಲಿ ಕನ್ಸರ್ವೇಟಿವ್ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅಲ್ಲಿನ ಮತಗಟ್ಟೆ ಸಮೀಕ್ಷೆಯಲ್ಲಿ ನಿರೀಕ್ಷಿಸಲಾಗಿತ್ತು. ಯಾವುದೇ ಪಕ್ಷ ಗೆದ್ದರೂ ಬಹುಮತದ ಅಂತರ ತುಂಬಾ ಕಡಿಮೆ ಇರಲಿದೆ ಎಂದು ವಿಶ್ಲೇಷಿಸಲಾಗಿತ್ತು.
ಡೇವಿಡ್ ಕ್ಯಾಮರಾನ್ ಸರ್ಕಾರ ಮತ್ತೆ ಐದು ವರ್ಷಗಳ ಕಾಲ ಅಧಿಕಾರ ನಡೆಸಲಿದೆ. 650 ಸ್ಥಾನಗಳಲ್ಲಿ ಬಹುತೇಕ ಸ್ಥಾನಗಳ ಫಲಿತಾಂಶ ಹೊರಬಿದ್ದಿದೆ. ಸದ್ಯದ ಮಾಹಿತಿ ಪ್ರಕಾರ 650 ಸ್ಥಾನಗಳಲ್ಲಿ 329 ಸ್ಥಾನಗಳಲ್ಲಿ ಆಡಳಿತಾರೂಢ ಪಕ್ಷ ಜಯಗಳಿಸಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಕರ್ನ್ಸವೇಟಿವ್ ಪಕ್ಷ 316 ಸ್ಥಾನ ಗಳಿಸಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಬ್ರಿಟನ್ ನಲ್ಲಿ ಆಡಳಿತ ನಡೆಸಲು 326 ಸಂಸತ್ ಸ್ಥಾನಗಳ ಅಗತ್ಯವಿದೆ.