ಕೋಯಂಬತ್ತೂರು : ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಕೇರಳದ ಪ್ರಮುಖ ಮಾವೋವಾದಿ ನಾಯಕ ರೂಪೇಶ್ ಹಾಗೂ ಆತನ ಪತ್ನಿ ಶ್ಯಾನ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ, ತಮಿಳುನಾಡು ಪೊಲೀಸರು ಹಾಗೂ ಕೇರಳದ ಮಾವೋವಾದಿ ನಿಗ್ರಹ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ರೂಪೇಶ್ ಹಾಗೂ ಆತನ ಪತ್ನಿಯೊಂದಿಗೆ ಇನ್ನೂ ಮೂವರು ಸಹಚರರು ಸಿಕ್ಕಿಬಿದ್ದಿದ್ದಾರೆ. ತಮಿಳುನಾಡಿನ ಕೋಯಂಬತ್ತೂರಿನಲ್ಲಿ ಮಾವೋವಾದಿಗಳನ್ನು ಬಂಧಿಸಲಾಗಿದೆ.
ಬಂಧಿತ ಮಾವೋವಾದಿಗಳನ್ನು ಆಂಧ್ರಪ್ರದೇಶದ ಪೊಲೀಸರು ವಿಚಾರಣೆಗೊಳಪಡಿಸಲಿದ್ದಾರೆ, ನಂತರ ಕೇರಳದ ವಶಕ್ಕೆ ಒಪ್ಪಿಸಲಿದ್ದಾರೆ ಎಂದು ಕೇರಳ ಗೃಹ ಸಚಿವ ರಮೇಶ್ ಚೆನ್ನಿತಲ ಹೇಳಿದ್ದಾರೆ. ಬಂಧಿತರ ವಿರುದ್ಧ, ಆಂಧ್ರಪ್ರದೇಶದ ಪ್ರಮುಖ ಮಾವೊ ನಾಯಕ ಮಲ್ಲರಾಜ ರೆಡ್ಡಿ ಹಾಗೂ ಆತನ ಪತ್ನಿಗೆ ಕೇರಳದಲ್ಲಿ ಆಶ್ರಯ ಕೊಟ್ಟಿರುವ ಆರೋಪವೂ ಕೇಳಿಬಂದಿದೆ.
2007ರಲ್ಲಿ ಆಂಧ್ರದ ಮಾವೋ ನಾಯಕ ರೆಡ್ಡಿ ಬಂಧನದ ನಂತರ ರೂಪೇಶ್ ತಲೆಮರೆಸಿಕೊಂಡಿದ್ದ, ರೂಪೇಶ್ ಪತ್ನಿ ಶ್ಯಾನ ಕೇರಳ ಹೈಕೋರ್ಟ್ ನ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದು ವಿಶೇಷ. ಈ ಇಬ್ಬರೂ ನಾಯಕರನ್ನು ಬಂಧಿಸುವ ಮೂಲಕ ಪೊಲೀಸರು ಮಹತ್ತರ ಸಾಧನೆ ಮಾಡಿದ್ದಾರೆ ಎಂದು ಕೇರಳ ಗೃಹ ಸಚಿವ ಚೆನ್ನಿತಲಾ ಹೇಳಿದ್ದಾರೆ.