ಬೆಂಗಳೂರು : ಬಂಡವಾಳ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ನಿಗದಿಯಾಗಿದ್ದ ಫ್ರಾನ್ಸ್, ಸ್ವೀಡನ್, ಜರ್ಮನ್ ಪ್ರವಾಸಕ್ಕೆ ತೆರಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ, ಇತರೆ ಕಾರ್ಯಕ್ರಮಗಳ ಒತ್ತಡದ ಹಿನ್ನೆಲೆಯಲ್ಲಿ ವಿದೇಶ ಪ್ರವಾಸಕ್ಕೆ ತೆರಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ಸಲುವಾಗಿ ಫ್ರಾನ್ಸ್, ಸ್ವೀಡನ್ ಹಾಗೂ ಜರ್ಮನ್ ಪ್ರವಾಸ ಕೈಗೊಳ್ಳಲು ಕೈಗಾರಿಕಾ ಇಲಾಖೆ ಆಯುಕ್ತ ಗೌರವ್ ಗುಪ್ತಾ ಪ್ರಸ್ತಾವನೆ ಸಲ್ಲಿಸಿದ್ದರು.
ಆದರೆ ಗ್ರಾಮ ಪಂಚಾಯತ್ ಚುನಾವಣೆ ನಿಟ್ಟಿನಲ್ಲಿ ತಾನು ವಿದೇಶ ಪ್ರವಾಸಕ್ಕೆ ಬರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ವಿದೇಶಕ್ಕೆ ತೆರಳಲಿದೆ. ಈ ತಂಡಲ್ಲಿ ಕೈಗಾರಿಕಾ ಇಲಾಖೆ ಆಯುಕ್ತ ಗೌರವ್ ಗುಪ್ತಾ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರತ್ನಪ್ರಭಾ ಸೇರಿದಂತೆ ಹಲವು ಅಧಿಕಾರಿಗಳಿದ್ದಾರೆ ಎಂದು ಮೂಲಗಳು ತಿಳಿಸಿವೆ.