ಮೈಸೂರು : ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಪುರುಷರು ಹಾಗೂ ಮಹಿಳೆಯರಿಗೆ ಶೇ.50ರಷ್ಟು ಸಮಾನ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.65ರಿಂದ 70ರಷ್ಟು ಮೀಸಲಾತಿ ಅವಕಾಶವಿತ್ತು. ಈ ಬಾರಿ ಅದನ್ನು ಕಡಿತಗೊಳಿಸಿ ಪುರುಷರು ಹಾಗೂ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲು ಪುರುಷರಿಗೆ ಶೇ.50 ಹಾಗೂ ಮಹಿಳೆಯರಿಗೆ ಶೇ.50 ಸಮಾನ ಅವಕಾಶ ಕಲ್ಪಿಸಲಾಗಿದೆ ಎಂದರು.
ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮಹಿಳೆಯರಿಗೆ ಸಿಂಹಪಾಲು ದೊರೆಯುತ್ತಿತ್ತು. ಈ ಬಾರಿ ಹೊಸ ಕಾಯ್ದೆಯ ಮೂಲಕ ತಿದ್ದುಪಡಿ ಮಾಡಿ ಪುರುಷರು ಹಾಗೂ ಮಹಿಳೆಯರಿಗೆ ಯಾವುದೇ ಹೆಚ್ಚಿನ ಮೀಸಲಾತಿ ಕಲ್ಪಿಸದೆ ಸಮಾನ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮೈಸೂರು-ಬೆಂಗಳೂರು ನಡುವೆ 6 ಪಥದ ರಸ್ತೆಗೆ ಅನುಮೋದನೆ ದೊರೆತಿದೆ. ಇದರ ಬಗ್ಗೆ ಮುಂದಿನ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕಾಗಿದೆ ಎಂದು ಇದೇ ವೇಳೆ ತಿಳಿಸಿದರು.