ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮೇ 14ರಿಂದ 19ರ ತನಕ ಚೀನಾ, ಮಂಗೋಲಿಯಾ ಹಾಗೂ ದಕ್ಷಿಣ ಕೊರಿಯಾ ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ಮೇ 14ರಿಂದ 16 ರವರೆಗೂ ಚೀನಾದಲ್ಲಿರುವ ಮೋದಿ, ಮೊದಲಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ತವರೂರಾದ ಕ್ಸಿಯಾನ್ ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರ ಆತಿಥ್ಯವನ್ನು ಸ್ವೀಕರಿಸಲಿರುವ ಮೋದಿ ಬಳಿಕ ಬೀಜಿಂಗ್ ಗೆ ತೆರಳಲಿದ್ದಾರೆ.
ಬೀಜಿಂಗ್ ನಲ್ಲಿ ವಾಣಿಜ್ಯಾಭಿವೃದ್ಧಿ ಹಾಗೂ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಕೊನೆಗೆ ಶಾಂಘೈ ನಗರಕ್ಕೆ ಆಗಮಿಸಲಿರುವ ಮೋದಿ, ಸಾರ್ವಜನಿಕ ಸಭೆಯಲ್ಲಿ ಚೀನಾದ ಯುವಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬಳಿಕ ಮಂಗೋಲಿಯಾಗೆ ಪ್ರಯಾಣ ಬೆಳೆಸಲಿರುವ ಮೋದಿ, ಮೇ 17ರಂದು ಮಂಗೋಲಿಯ ಹಿರಿಯ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮಂಗೋಲಿಯ ಪ್ರವಾಸದ ಬಳಿಕ ಕೊನೆಗೆ ದಕ್ಷಿಣ ಕೊರಿಯಾಗೆ ಭೇಟಿ ನೀಡಲಿದ್ದು, ಅಧ್ಯಕ್ಷ ಪಾರ್ಕ್ ಗಿನ್ ಹೆ ಜೊತೆ ಮಾತುಕತೆ ನಡೆಸಲಿದ್ದಾರೆ.