ಮುಂಬೈ : 'ಮಹಾರಾಷ್ಟ್ರ'ದಲ್ಲಿ ನಡೆಯಬೇಕಿದ್ದ ಪಾಕಿಸ್ತಾನದ ಗಾಯಕ ಅತೀಫ್ ಅಸ್ಲಂ ಅವರ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಶಿವಸೇನೆ ತೀವ್ರ ವಿರೋಧಪಡಿಸಿದ ಹಿನ್ನೆಲೆಯಲ್ಲಿ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಕಾರ್ಯಕ್ರಮ ರದ್ದುಗೊಂಡಿರುವುದನ್ನು ಸಂಚಾಲಕ ಸಂಜಯ್ ಸಾಠೆ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಈ ಸಂಗೀತ ಕಾರ್ಯಕ್ರಮವನ್ನು ವಿರೋಧಿಸಿದ ಶಿವಸೇನೆಯು ಇದನ್ನು ಪುಣೆಯಲ್ಲಿ ನಡೆಸಬಾರದೆಂದು ಒತ್ತಾಯಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಶಿವಸೇನೆಯ ನಾಯಕ ಮಹಾದೇವ್ ಬಾಬರ್, ಶಿವಸೇನೆಯು ಯಾವಾಗಲೂ ಪಾಕಿಸ್ಥಾನದ ಮತ್ತು ಅಲ್ಲಿಂದ ಬರುವ ಕಲಾವಿದರ ವಿರುದ್ಧವಾಗಿದೆ. ಅದು ಯಾವಾಗಲೂ ನಮ್ಮ ಬೆನ್ನು ಹಿಂದೆ ಚೂರಿ ಹಾಕುವ ಕೆಲಸ ಮಾಡಿದೆ. ಹಾಗಾಗಿ ನಾವು ಈ ಕಾರ್ಯಕ್ರಮವನ್ನು ಹೇಗೆ ಬೆಂಬಲಿಸಬೇಕು ಎಂದು ಪ್ರಶ್ನಿಸಿದ್ದರು.
ನಮ್ಮ ರಾಷ್ಟ್ರಕ್ಕೆ ಮಹತ್ವ ಕೋಡಬೇಕು ಎಂದು ಬಾಳ್ ಠಾಕ್ರೆ ಹೇಳುತ್ತಿದ್ದರು. ಆದ್ದರಿಂದ ಬಹಳ ಯೋಚನೆ ಮಾಡಿ ಈ ನೇರ ಸಂಗೀತ ಕಾರ್ಯಕ್ರಮವನ್ನು ರದ್ದು ಮಾಡುತ್ತಿದ್ದೇವೆ ಎಂದು ಸಂಜಯ್ ಸಾಠೆ ಅವರು ಹೇಳಿದ್ದಾರೆ. ಇದುವರೆಗೆ ಈ ಕಾರ್ಯಕ್ರಮದ ಒಂದು ಸಾವಿರಕ್ಕಿಂತ ಹೆಚ್ಚು ಟಿಕೆಟ್ ಗಳು ಮಾರಾಟವಾಗಿವೆ. ಎಲ್ಲ ಟಿಕೆಟ್ಗಳ ದುಡ್ಡನ್ನು ಆಯಾ ಟಿಕೆಟುದಾರರಿಗೆ ಹಿಂದಿರುಗಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.