ನವದೆಹಲಿ : ಆಮ್ ಆದ್ಮಿ ಪಕ್ಷ ಹಮ್ಮಿಕೊಂಡಿದ್ದ ರೈತರ ರ್ಯಾಲಿಯಲ್ಲಿ ಪ್ರತಿಭಟನಾಕಾರರ ಎದುರೇ ಆತ್ಮಹತ್ಯೆಗೆ ಶರಣಾಗಿದ್ದ ರಾಜಸ್ತಾನದ ರೈತ ಗಜೇಂದ್ರ ಸಿಂಗ್ ಪ್ರಕರಣ ಸಂಸತ್ ನ ಉಭಯ ಸದನಗಳಲ್ಲೂ ಪ್ರತಿಧ್ವನಿಸಿ ಗದ್ದಲ, ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
ಆಪ್ ಜಂತರ್ ಮಂತರ್ ನಲ್ಲಿ ನಡೆಸಿದ್ದ ರ್ಯಾಲಿ ವೇಳೆ ಆತ್ಮಹತ್ಯೆ ಮಾಡಿಕೊಂಡ ರೈತ ಗಜೇಂದ್ರ ಸಿಂಗ್ ಸಾವಿನ ಪ್ರಕರಣದ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಪ್ರಶ್ನೋತ್ತರ ಅವಧಿಯನ್ನು ಮುಂದೂಡಬೇಕು ಎಂಬ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಯ ಮನವಿಯನ್ನು ಸ್ಪೀಕರ್ ತಿರಸ್ಕರಿಸಿದರು.
ಆಪ್ ರ್ಯಾಲಿ ವೇಳೆ ಆತ್ಮಹತ್ಯೆ ಮಾಡಿಕೊಂಡ ರೈತ ಗಜೇಂದ್ರ ಸಿಂಗ್ ಸಾವಿಗೆ ಯಾರು ಕಾರಣ, ಕಾರ್ಯಕರ್ತರು ಕಾರಣರೇ ಅಥವಾ ಪೊಲೀಸರು ಕಾರಣರೇ? ಈ ಘಟನೆಗೆ ಕಾರಣಕರ್ತರು ಯಾರು ಎಂದು ಖರ್ಗೆ ಪ್ರಶ್ನಿಸಿದರು. ಈ ಬಗ್ಗೆ ಚರ್ಚೆ ನಡೆಯಲೇ ಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ವೆಂಕಯ್ಯ ನಾಯ್ಡು, ಈ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದರು. ಇದು ಗಂಭೀರ ವಿಷಯವಾಗಿದೆ. ಹಾಗಾಗಿ ಈ ಬಗ್ಗೆ ಚರ್ಚಿಸಲು ನಮ್ಮದೇನೂ ಅಭ್ಯಂತರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ ಕಾಂಗ್ರೆಸ್ ಸಂಸದರು ಹಾಗೂ ವಿಪಕ್ಷಗಳ ಸದಸ್ಯರು ತೀವ್ರ ಕೋಲಾಹಲ ನಡೆಸಿದ ಪರಿಣಾಮ ಸ್ಪೀಕರ್ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.