ಚೆನ್ನೈ : 11 ವರ್ಷಗಳ ಹಿಂದೆ ಕೇರಳದಿಂದ ಹೊರದಬ್ಬಲ್ಪಟ್ಟಿದ್ದ ವಿಶ್ವದ ಅತಿದೊಡ್ಡ ತಂಪು ಪಾನೀಯ ಉತ್ಪಾದನಾ ಕಂಪನಿ ಕೋಕಾ ಕೋಲಾಕ್ಕೆ ಇದೀಗ ನೆರೆಯ ತಮಿಳುನಾಡು ಸರ್ಕಾರ ಕೂಡಾ ಗೇಟ್ ಪಾಸ್ ನೀಡಿದೆ.
ಈರೋಡ್ ಜಿಲ್ಲೆಯ ಪೆರುಂದುರೈನಲ್ಲಿ ಕಂಪನಿಗೆ ನೀಡಿದ್ದ ಪರವಾನಗಿಯನ್ನು ತಮಿಳುನಾಡು ಸರ್ಕಾರ ರದ್ದುಪಡಿಸಿದೆ. ಯೋಜನೆಗೆ ಅನುಮತಿ ನೀಡಿದ 6 ತಿಂಗಳ ಒಳಗೆ ಯಾವುದೇ ಕಾಮಗಾರಿ ಆರಂಭಿಸದ ಹಿನ್ನೆಲೆಯಲ್ಲಿ ಕಂಪನಿಗೆ ನೀಡಿದ್ದ ಪರವಾನಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ರಾಜ್ಯ ಕೈಗಾರಿಕಾ ಉತ್ತೇಜನಾ ಮಂಡಳಿ ತಿಳಿಸಿದೆ. ಆದರೆ ಯೋಜನೆ ಜಾರಿಗೆ ಸ್ಥಳೀಯ ರೈತ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
ಈರೋಡ್ ಜಿಲ್ಲೆಯ ಪೆರುಂದುರೈನಲ್ಲಿ ಸುಮಾರು 71.34 ಎಕರೆ ಜಾಗದಲ್ಲಿ ತಂಪು ಪಾನೀಯ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕೋಕಾ ಕೋಲಾ ಕಂಪನಿಗೆ ತಮಿಳುನಾಡು ಸರ್ಕಾರ 2013ರಲ್ಲಿ ಪರವಾನಗಿ ನೀಡಿತ್ತು. ಒಟ್ಟಾರೆ 500 ಕೋಟಿ ರೂ. ಬಂಡವಾಳ ಹೂಡಿಕೆಯ ಯೋಜನೆ ಇದಾಗಿತ್ತು. ಈ ಘಟಕದಲ್ಲಿ ನಿತ್ಯ 40 ಲಕ್ಷ ಲೀಟರ್ ನಷ್ಟು ನೀರು ಬಳಸಿಕೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು.
ಆದರೆ ನಿತ್ಯ ಇಷ್ಟೊಂದು ಪ್ರಮಾಣದಲ್ಲಿ ನೀರನ್ನು ಬಳಸಲು ಅನುಮತಿ ನೀಡಿದರೆ ಅಂತರ್ಜಲ ಮಟ್ಟ ಭಾರೀ ಪ್ರಮಾಣದಲ್ಲಿ ಕುಸಿಯಲಿದೆ. ಇದು ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಭಟನೆಗಳು ಕೂಡಾ ನಡೆದಿದ್ದವು.
ಈ ಹಿಂದೆ ಕೇರಳ ಸರ್ಕಾರ ಕೂಡಾ ಪ್ಲಾಚಿಮಾಡಾದಲ್ಲಿ ಕೋಕಾ ಕೋಲಾ ಕಂಪನಿಗೆ ಬಾಟ್ಲಿಂಗ್ ಘಟಕ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಆದರೆ ರೈತ ಸಮುದಾಯ ಭಾರೀ ಪ್ರತಿಭಟನೆ ನಡೆಸಿದ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ 2004ರಲ್ಲಿ ಅನುಮತಿ ಹಿಂದಕ್ಕೆ ಪಡೆದಿತ್ತು.