ನವದೆಹಲಿ : 'ಹಿಂದಿ ದಿವಸ್' ಅಂಗವಾಗಿ ನೀಡಲಾಗುತ್ತಿದ್ದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರಿನ ಪ್ರಶಸ್ತಿಗಳಿಗೆ ಕೇಂದ್ರ ಸರ್ಕಾರ ಮರು ನಾಮಕರಣ ಮಾಡಿದೆ.
ಪ್ರತಿ ವರ್ಷ ಹಿಂದಿ ದಿವಸ್ ಅಂಗವಾಗಿ ಕೇಂದ್ರ ಸರ್ಕಾರದ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಈ ವರ್ಷ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಪ್ರಶಸ್ತಿಯಿಂದ ಕಾಂಗ್ರೆಸ್ ನ ಪ್ರಧಾನ ಮಂತ್ರಿಗಳ ಹೆಸರನ್ನು ಕಿತ್ತುಹಾಕಿದ್ದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಲಿದೆ.
ಹಿಂದಿ ದಿವಸ್ ದಿನದಂದು ಇಂದಿರಾ ಗಾಂಧಿ ರಾಜ್ಯಭಾಷಾ ಪುರಸ್ಕಾರ ಮತ್ತು ರಾಜೀವ್ ಗಾಂಧಿ ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತಿತ್ತು. ಆದರೆ ಈಗ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ, ಮಾಜಿ ಪ್ರಧಾನಿಗಳ ಹೆಸರಿನ ಬದಲು ಪ್ರಶಸ್ತಿಗಳಿಗೆ ರಾಜ್ಯಭಾಷಾ ಕೀರ್ತಿ ಪುರಸ್ಕಾರ ಹಾಗೂ ರಾಜ್ಯಭಾಷಾ ಗೌರವ ಪುರಸ್ಕಾರ ಎಂದು ನಾಮಕರಣ ಮಾಡಿದೆ. ಈ ಪ್ರಶಸ್ತಿಗಳ ಹೆಸರನ್ನು ಬದಲಾಯಿಸಲು ಮಾರ್ಚ್ 25ರಂದು ಆದೇಶ ಹೊರಡಿಸಲಾಗಿತ್ತು.
ಪ್ರಶಸ್ತಿಗಳಿಂದ ಮಾಜಿ ಪ್ರಧಾನಿಗಳ ಹೆಸರನ್ನು ಕಿತ್ತುಹಾಕಿರುವುದನ್ನು ಸಮರ್ಥಿಸಿಕೊಂಡಿರುವ ಗೃಹ ಸಚಿವಾಲಯದ ರಾಜ್ಯಸಚಿವ ಕಿರಣ್ ರಿಜಿಜು, ಪ್ರಶಸ್ತಿಗಳ ಹೆಸರು ಬದಲಾವಣೆ ಆಡಳಿತಾತ್ಮಕ ನಿರ್ಧಾರವೇ ಹೊರತು ರಾಜಕೀಯ ದುರುದ್ದೇಶ ಅಲ್ಲ ಎಂದು ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದ್ದು ಮಾಜಿ ಪ್ರಧಾನಿಗಳ ಹೆಸರನ್ನು ಯಾವ ಕಾರಣದಿಂದ ಕೈಬಿಡಲಾಗಿದೆ ಎಂಬುದನ್ನು ವಿವರಿಸುವಂತೆ ಒತ್ತಾಯಿಸಿದೆ.