ಬೀಜಿಂಗ್ : 'ಚೀನಾ',ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಪ್ರದೇಶದಲ್ಲಿರುವ ತನ್ನ ಗಡಿ ಭಾಗದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸಿದ್ಧತೆ ನಡೆಸಿದೆ.
ಚೀನಾದ ನಾಗರಿಕ ವಿಮಾನಯಾನ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಸ್ಥಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ವಿಮಾನ ನಿಲ್ದಾಣ ಇದಾಗಿದೆ. ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರುವ ನಗರ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪ್ರವೇಶಿಸುವುದಕ್ಕೂ ಮುನ್ನ ಕಾರಕೋರಂ ಹೆದ್ದಾರಿಯ ಬಳಿ ಸಿಗುವ ಕೊನೆಯ ಅತಿ ಮುಖ್ಯ ಪ್ರದೇಶವಾಗಿದೆ. ಈ ಹಿನ್ನೆಲೆಯಲ್ಲಿ ಚೀನಾ ಆಯಕಟ್ಟಿನ ಸ್ಥಳದಲ್ಲೇ ವಿಮಾನ ನಿಲ್ದಾಣ ನಿರ್ಮಿಸಲು ತೀರ್ಮಾನಿಸಿದೆ.
ಚೀನಾ ಇಂಜಿನಿಯರ್ ಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು ಮೂರು ಸ್ಥಳಗಳನ್ನು ಪಟ್ಟಿ ಮಾಡಿದ್ದಾರೆ. ಸಮುದ್ರ ಮಟ್ಟದಿಂದ 3,200 ಎತ್ತರದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಅತಿ ದೂರವಿರುವ ರಿಮೋಟ್ ಪ್ರದೇಶಗಳಿಗೆ ವೇಗವಾಗಿ ಸಂಪನ್ಮೂಲಗಳನ್ನು ವರ್ಗಾಯಿಸಲು ಚೀನಾ ಈ ವಿಮಾನ ನಿಲ್ದಾಣವನ್ನು ಬಳಸಿಕೊಳ್ಳಲಿದೆ. ಸುಮಾರು 50,000 ಜನರಿರುವ ಈ ಗಡಿ ಪ್ರದೇಶದಲ್ಲಿ ಚೀನಾ ಮೂಲಸೌಕರ್ಯ ಅಭಿವೃದ್ಧಿ ಮಾಡುತ್ತಿರುವುದು ಭಾರತ ಸರ್ಕಾರಕ್ಕೆ ಆತಂಕ ಉಂಟುಮಾಡಿದೆ.
ಪ್ರಮುಖವಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೊಂದಿಕೊಂಡಂತಿರುವ ಗಡಿ ಪ್ರದೇಶದಲ್ಲಿ ಚೀನಾ ಅತ್ಯಾಧುನಿಕ ವಿಮಾನ ನಿಲ್ದಾಣವನ್ನು ನಿರ್ಮಿಸಲು ಮುಂದಾಗುತ್ತಿರುವುದು ಭಾರತ ಬಹುದೊಡ್ಡ ಸವಾಲು ಎದುರಿಸುವಂತೆ ಮಾಡಿದೆ.