ಜಮ್ಮು-ಕಾಶ್ಮೀರ : 'ಕಾಶ್ಮೀರ' ಪ್ರತ್ಯೇಕತಾವಾದಿ ಮಸರತ್ ಆಲಂನನ್ನು ಬಂಧಿಸಿರುವುದನ್ನು ವಿರೋಧಿಸಿ ಆಲಂ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಇನ್ನೊಬ್ಬ ಪ್ರತ್ಯೇಕತವಾದಿ ಸಯೀದ್ ಅಲಿ ಗಿಲಾನಿ ಏ.15ರಂದು ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಪ್ರತ್ಯೇಕತಾವಾದಿ ಮಸರತ್ ಆಲಂ, ಪಾಕಿಸ್ತಾನದ ಧ್ವಜ ಹಾರಿಸಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಜಮ್ಮು-ಕಾಶ್ಮೀರ ಸಿ.ಎಂ ಮುಫ್ತಿ ಮೊಹಮದ್ ಸಯೀದ್ ಗೆ ಸೂಚನೆ ನೀಡಿದ್ದರು. ಏ.17ರಂದು ಬೆಳಿಗ್ಗೆ ಮಸರತ್ ಆಲಂ ನನ್ನು ಬಂಧಿಸಲಾಗಿತ್ತು. ತಮ್ಮ ನಾಯಕನನ್ನು ಬಂಧಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಸರತ್ ಆಲಂ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತ್ಯೇಕತಾವಾದಿ ಬೆಂಬಲಿಗರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರತಿಭಟನಾ ನಿರತರ ಮೇಲೆ ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.