ತಿರುವನಂತಪುರ : ಭಾರತದ ಮುಂಗಾರಿನ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಕೇರಳಕ್ಕೆ ಈ ವರ್ಷ ಒಂದು ವಾರ ಮೊದಲೇ ಮುಂಗಾರು ಮಳೆ ಆರಂಭವಾಗಲಿದೆ. ಬಹುತೇಕ ಮೇ 24ರಿಂದ 27ರ ನಡುವೆ ಮುಂಗಾರು ಪ್ರವೇಶವಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸುತ್ತದೆ. ಆದರೆ ಈ ಸಲ ಮೇ ಕಡೇ ವಾರದಲ್ಲಿ ಮಳೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಪ್ರಸಿದ್ಧ ಹವಾಮಾನ ತಜ್ಞ, ಪುಣೆ ಹವಾಮಾನ ತರಬೇತಿ ಕೇಂದ್ರದ ಮಾಜಿ ನಿರ್ದೇಶಕ ಪಿ.ವಿ.ಜೋಸೆಫ್ ಲೆಕ್ಕ ಹಾಕಿದ್ದಾರೆ.
ಮಳೆಗಾಲ ಬೇಗ ಶುರು ವಾಗಿರುವುದರಿಂದ ಉತ್ತಮ ಮಳೆಯಾಗಬಹುದು ಎನ್ನುವಂತಿಲ್ಲ. ಮುಂಗಾರು ಪ್ರವೇಶಕ್ಕೂ ಮುಂದಿನ ನಾಲ್ಕು ತಿಂಗಳ ಮಳೆಗೂ ಹೆಚ್ಚಿನ ಸಂಬಂಧ ಇಲ್ಲ. ಕೆಲವೊಮ್ಮೆ ಮಧ್ಯೆ ಮುಂಗಾರು ದುರ್ಬಲವಾಗುವುದೂ ಇದೆ. ಆದರೆ ಬಂಗಾಳ ಕೊಲ್ಲಿಯ ಹವಾಮಾನದ ಅಧ್ಯಯನದಿಂದ ಮಳೆಗಾಲ ಒಂದು ವಾರ ಮೊದಲು ಶುರುವಾಗುವ ಮುನ್ಸೂಚನೆ ಸಿಕ್ಕಿದೆ ಎಂದು ಜೋಸೆಫ್ ತಿಳಿಸಿದ್ದಾರೆ.