ನವದೆಹಲಿ : ಕಳೆದ ಸಾಲಿನಲ್ಲಿ ಮುಂಗಾರು ಮಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದ ’ಎಲ್ ನಿನೋ' ಪ್ರಭಾವ ಈ ಬಾರಿಯೂ ಸದ್ದು ಮಾಡತೊಡಗಿದೆ. ಈ ಬಾರಿ ’ಎಲ್ ನಿನೋ” ಪ್ರಭಾವ ಶೇ.50ರಷ್ಟು ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಮೆರಿಕ ಹಾಗೂ ಆಸ್ಟ್ರೇಲಿಯಾಗಳು ಈ ವರ್ಷವೂ ’ಎಲ್ ನಿನೋ' ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಈಗಾಗಲೇ ಭವಿಷ್ಯ ನುಡಿದಿವೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಮುನ್ಸೂಚನೆಯಿಂದ ಮಳೆ ಪ್ರಮಾಣ ತಗ್ಗುವ ಅಪಾಯ ಎದುರಾಗಿದ್ದು ರೈತರು ಆತಂಕಪಡುವಂತಾಗಿದೆ.
ಆದರೆ, ಈಗ ಬಂದಿರುವ ಮುನ್ಸೂಚನೆ ಅವಧಿಪೂರ್ವದ್ದಾಗಿದೆ. ಹೀಗಾಗಿ ಇದು ಹೆಚ್ಚು ನಿಖರತೆ ಹೊಂದಿರುವುದಿಲ್ಲ ಎಂಬ ವಾದವೂ ಕೇಳಿಬಂದಿದೆ. ಕಳೆದ ವರ್ಷ ಎಲ್ ನಿನೋ ಪ್ರಭಾವದಿಂದಾಗಿ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿರಲಿಲ್ಲ. ಎಲ್ ನಿನೋ ಪರಿಣಾಮ ತಗ್ಗಿದ ಬಳಿಕ ಆಗಸ್ಟ್ ನಲ್ಲಿ ಚೆನ್ನಾಗಿ ಮಳೆ ಸುರಿದಿತ್ತು.