ಜಮ್ಮು-ಕಾಶ್ಮೀರ : 'ಕಾಶ್ಮೀರ ಪ್ರತ್ಯೇಕತಾವಾದಿ' ಯಾಸೀನ್ ಮಲೀಕ್ ನನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವುದನ್ನು ವಿರೋಧಿಸಿ ಪ್ರತ್ಯೇಕತಾವಾದಿ ಯಾಸೀನ್ ಮಲೀಕ್ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ಟೌನ್ ಶಿಪ್ ನಿರ್ಮಿಸುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್ ಅವರು ಮುಖ್ಯಮಂತ್ರಿ ಮುಫ್ತಿಮಹಮ್ಮದ್ ಗೆ ತಿರುಗೇಟು ನೀಡಿದ್ದರು. ಇದರಿಂದ ಕೆರಳಿರುವ ಪ್ರತ್ಯೇಕತಾವಾದಿಗಳು ಪ್ರತಿಭಟನೆ ನಡೆಸಲು ಪ್ರಾರಂಭಿಸಿದ್ದಾರೆ.
ಏ.10ರಂದು ಶ್ರೀನಗರದಲ್ಲಿ ಜೆ.ಕೆ.ಎಲ್.ಎಫ್ ನ(ಪ್ರತ್ಯೇಕತವಾದಿ ಸಂಘಟನೆ) ಮುಖಂಡ ಯಾಸಿನ್ ಮಲೀಕ್ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ಗುಂಪನ್ನು ಚದುರಿಸಲು ಅಶ್ರುವಾಯು ಸಿಡಿಸಿದ್ದಾರೆ. ಇದಲ್ಲದೆ ಕೆಲವು ಕಡೆ ರಸ್ತೆ ತಡೆ ನಡೆದಿದ್ದು, ಮತ್ತೆ ಕಣಿವೆ ರಾಜ್ಯದಲ್ಲಿ ಅಶಾಂತಿ ಉಂಟಾಗಿದೆ.