ಪ್ಯಾರಿಸ್ : 'ತ್ರಿರಾಷ್ಟ್ರಗಳ ಪ್ರವಾಸ' ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ ತಡರಾತ್ರಿ ಫ್ರ್ಯಾನ್ಸ್ ರಾಜಧಾನಿ ಪ್ಯಾರಿಸ್ ಗೆ ಬಂದಿಳಿದಿದ್ದಾರೆ. ವಿಶೇಷ ವಿಮಾನದಲ್ಲಿ ಉನ್ನತ ನಿಯೋಗದೊಂದಿಗೆ ಆಗಮಿಸಿದ ನರೇಂದ್ರಮೋದಿ ಅವರನ್ನು ಫ್ರಾನ್ಸ್ ಸಚಿವರು ಹಾಗೂ ಅಲ್ಲಿರುವ ಭಾರತದ ರಾಯಭಾರಿ ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು.
ಪ್ರಧಾನಿ ಮೋದಿ ಏ.10ರಂದು ಫ್ರ್ಯಾನ್ಸ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ನಾಗರಿಕ ಪರಮಾಣು ಒಪ್ಪಂದ, ರಕ್ಷಣೆ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ. ಭಾರತ ಮತ್ತು ಫ್ರಾನ್ಸ್ ನಡುವೆ ವ್ಯಾಪಾರ-ವಹಿವಾಟು ಹೆಚ್ಚಿಸುವುದು, ಬಾಹ್ಯಾಕಾಶ ಕ್ಷೇತ್ರದಲ್ಲಿ ತಂತ್ರಜ್ಞಾನ ವಿನಿಮಯ, ಸಮುದ್ರ ಮಾರ್ಗದ ಮೂಲಕ ಆಮದು ಮತ್ತು ರಫ್ತಿಗೆ ಒತ್ತು ನೀಡುವ ಸಂಭವವಿದೆ.
ಇನ್ನು ಮೋದಿ ಅವರ ಮಹತ್ವಾಕಾಂಕ್ಷಿ ಮೇಕ್ ಇಂಡಿಯಾ ಯೋಜನೆಯಲ್ಲಿ ಫ್ರೆಂಚ್ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಮೂಲಕ ಭಾರತದಲ್ಲಿ ಬಂಡವಾಳ ಹೂಡಲು ಫ್ರೆಂಚ್ ಕಂಪನಿಗಳು ಮುಂದೆಬರುವ ಸಾಧ್ಯತೆಗಳಿವೆ. ಮೋದಿ ಭೇಟಿ ವೆಳೆಯಲ್ಲಿ 'ಮೇಕ್ ಇನ್ ಇಂಡಿಯಾಕ್ಕೆ ಒತ್ತು ನೀಡುವುದು ಪ್ರಮುಖ ಉದ್ದೇಶವಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಸಯ್ಯದ್ ಅಕ್ಬರುದ್ದೀನ್ ತಿಳಿಸಿದರು. ಇದೇ ವೇಳೆ ನೆನೆಗುದಿಗೆ ಬಿದ್ದಿರುವ ರಫೇಲ್ ಯುದ್ಧವಿಮಾನ ಒಪ್ಪಂದಕ್ಕೂ ಮೋದಿ ಸಹಿ ಹಾಕಲಿದ್ದಾರೆ ಎಂದು ತಿಳಿದುಬಂದಿದೆ. ಫ್ರಾನ್ಸ್ ಪ್ರವಾಸದ ನಂತರ ಮೋದಿಯವರು ಜರ್ಮನಿ ಹಾಗೂ ಕೆನಡಾಕ್ಕೆ ಭೇಟಿ ನೀಡಲಿದ್ದಾರೆ.