ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ತಿಂಗಳ ಜನಪ್ರಿಯ ರೇಡಿಯೊ ಕಾರ್ಯಕ್ರಮಕ್ಕೆ ಇಂದು ಮೂರು ವರ್ಷ. ಈ ಹಿನ್ನಲೆಯಲ್ಲಿ 36ನೇ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಜನರೊಂದಿಗೆ ಬೆರೆತು ಅವರದೇ ಮಾತುಗಳನ್ನು ವ್ಯಕ್ತಪಡಿಸುವ ಈ ಕಾರ್ಯಕ್ರಮ ನನ್ನ ಮನದ ಮಾತಲ್ಲ. ಬದಲಾಗಿ ಜನರ ಭಾವನೆಗಳೊಂದಿಗೆ ಬೆರೆತ ಅವನ ಮನಸಿನ ಮಾತಾಗಿದೆ ಎಂದು ಹೇಳಿದ್ದಾರೆ.
ಜನರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಪಯಣಯಾಗಿದ್ದು, ಈ ಕಾರ್ಯಕ್ರಮದ ಮುಖೇನ ನನ್ನ ಅಭಿಪ್ರಾಯ ವ್ಯಕ್ತಪಡಿಸುವುದಕ್ಕಿಂತಲೂ ಜನರ ಆಲೋಚನೆ ಹಾಗೂ ಮಹಾತ್ವಾಕಾಂಕ್ಷೆಯನ್ನು ಮುಂದಿಟ್ಟಿದ್ದೇನೆ. ಇಲ್ಲಿ ರಾಜಕೀಯ ದೂರವಿಟ್ಟು ಜನರೊಂದಿಗೆ ಬೆರೆಯಲು ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದಾರೆ.
ಮನ್ ಕೀ ಬಾತ್ ನಲ್ಲಿ ಸ್ವಚ್ಛತೆಯ ಬಗ್ಗೆ ಸಂಕಲ್ಪಮಾಡಲಾಗಿತ್ತು. ಅಭಿವೃದ್ಧಿ ಎಂದರೆ ಸ್ವಚ್ಛತೆ ಎಂಬುದು ಜನರಿಗೆ ಮನವರಿಕೆಯಾಗಿದೆ. ಹಾಗಾಗಿ ದೇಶದ ಜನರು ಸ್ವಚ್ಛತಾ ಉತ್ಸವದಲ್ಲಿ ಸಮರೋಪಾದಿಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹೇಳಿದರು.
ಸ್ವಚ್ಛತೆ ಬಗ್ಗೆ ಮಾತನಾಡಿದಾಗ ಬಿಲಾಲ್ ದಾರ್ ನನ್ನು ನೆನೆಯಲೇ ಬೇಕು. ದಾಲ್ ಸರೋವರದಿಂದ ವರ್ಷದಲ್ಲಿ 12 ಸಾವಿರ ಕೆ.ಜಿ. ತ್ಯಾಜ್ಯವನ್ನು ಹೊರತಂದು, ನೀರು ಸ್ವಚ್ಛಗೊಳಿಸಿರುವ ಶ್ರೀನಗರದ 18 ವರ್ಷದ ಬಾಲಕ ಈತ. ಈತ ದೇಶದ ಹೆಮ್ಮೆ ಆತನಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಅಲ್ಲದೇ ಬಿಲಾಲ್ ದಾರ್ ನನ್ನು ಸ್ವಚ್ಛತೆಯ ರಾಯಭಾರಿಯಾಗಿ ಶ್ರೀನಗರದ ಮುನ್ಸಿಪಲ್ ಕಾರ್ಪೊರೇಷನ್ ಆಯ್ಕೆ ಮಾಡಿದೆ ಎಂದು ಪ್ರಧಾನಿ ಹೇಳಿದರು.
ಖಾದಿ ಕೇವಲ ಉಡುಪು ಮಾತ್ರವಲ್ಲ. ಅದೊಂದು ಆಂದೋಲನ. ಖಾದಿ ಅಭಿಯಾನದಂತೆ ಸಾಗಬೇಕಿದೆ. ಜನರಲ್ಲಿ ಖಾದಿ ಕುರಿತು ಆಸಕ್ತಿ ಹೆಚ್ಚಿದ್ದು, ಖಾದಿ ಬಟ್ಟೆಗಳ ಮಾರಾಟ ಹೆಚ್ಚಿರುವುದರಿಂದ ಬಡ ಜನತೆಗೆ ಉದ್ಯೋಗ ನೀಡಿದಂತಾಗಿದೆ ಎಂದು ತಿಳಿಸಿದರು.