ನವದೆಹಲಿ : ಇತ್ತೀಚಿನ ದೂರವಾಣಿ ತರಂಗಾಂತರಗಳ ಹರಾಜು ಪ್ರಕ್ರಿಯೆಯು ದೂರವಾಣಿ ಕಂಪನಿಗಳಿಗೆ ಭಾರಿ ವೆಚ್ಚದಾಯಕವಾದ ಹಿನ್ನೆಲೆಯಲ್ಲಿ ಮೊಬೈಲ್ ಕರೆದರಗಳು ಏರಬಹುದು ಎನ್ನಲಾಗಿತ್ತು. ಆದರೆ ಇದರ ಬದಲಿಗೆ ಸ್ಥಳೀಯ/ರೋಮಿಂಗ್ ಎಸ್ಸೆಮ್ಮೆಸ್ ದರ ಮತ್ತು ಸ್ಥಳೀಯ/ರೋಮಿಂಗ್ ಕರೆ ದರಗಳಲ್ಲಿ ಭಾರಿ ಇಳಿಕೆಯಾಗಲಿದೆ.
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಗರಿಷ್ಠ ಪರಿಮಿತಿ ಶುಲ್ಕವನ್ನು ಕಡಿತ ಮಾಡಿದ ಪರಿಣಾಮವಾಗಿ ಮೇ 1ರಿಂದ ಮೊಬೈಲ್ ರೋಮಿಂಗ್ ದರ ಶೇ.23ರಷ್ಟು ಮತ್ತು ಸ್ಥಳೀಯ ಎಸ್ಎಂಎಸ್ ದರ ಶೇ. 75ರಷ್ಟು ಕಡಿಮೆಯಾಗಲಿದೆ.
ಸ್ಥಳೀಯ ಎಸ್ಎಂಎಸ್ ಗೆ ಕಂಪನಿಗಳು ವಿಧಿಸುತ್ತಿದ್ದ ಗರಿಷ್ಠ 1 ರೂ. ದರವು ಇನ್ನು ಮುಂದೆ ಕೇವಲ 25 ಪೈಸೆಯಾಗಲಿದೆ. ಅಲ್ಲದೆ, ಸ್ಥಳೀಯ ಕರೆ ದರವು ಗರಿಷ್ಠ 1 ರೂ. ಬದಲು 80 ಪೈಸೆಯಾಗಲಿದೆ. ರೋಮಿಂಗ್ನಲ್ಲಿರುವಾಗ ಮಾಡುವ ಎಸ್ ಟಿಡಿ ಕರೆಯ ದರ ನಿಮಿಷಕ್ಕೆ 1.50ರೂ.ನಿಂದ ರೂ. 1.15ಕ್ಕಿಳಿಯಲಿದೆ. ರಾಷ್ಟ್ರೀಯ ಎಸ್ಎಂಎಸ್ ದರ 1.50 ರೂ.ನಿಂದ 38 ಪೈಸೆಗಿಳಿಯಲಿದೆ.
ತಮ್ಮ ವೃತ್ತ ಹೊರತುಪಡಿಸಿ ರೋಮಿಂಗ್ನಲ್ಲಿರುವಾಗ, ಸ್ಥಳೀಯ ದರದಲ್ಲಿ ಕರೆಗಳನ್ನು ಮಾಡುವ ಮತ್ತು ಎಸ್ಎಂಎಸ್ ರವಾನಿಸುವ ಸೌಲಭ್ಯ ಗ್ರಾಹಕರಿಗೆ ಇರುವುದಿಲ್ಲ.
"ನ್ಯಾಷನಲ್ ರೋಮಿಂಗ್ ಮತ್ತು ಸ್ಥಳೀಯ ಎಸ್.ಎಂ.ಎಸ್ ಗರಿಷ್ಠ ದರವನ್ನು ಕಡಿತ ಮಾಡಲಾಗಿದೆ. ಟೆಲಿಕಾಂ ಕಂಪನಿಗಳು ವಿಶೇಷ ರೋಮಿಂಗ್ ಸ್ಕೀಂ ನೀಡುವುದನ್ನು ಕಡ್ಡಾಯಗೊಳಿಸಿದೆ. ಮೇ 1ರಿಂದ ಹೊಸ ದರ ಜಾರಿಗೆ ಬರಲಿದೆ' ಎಂದು ಟ್ರಾಯ್ ಗುರುವಾರ ಹೇಳಿಕೆ ನೀಡಿದೆ.
ಎಸ್.ಟಿ.ಡಿ ಕರೆದರವನ್ನು 1 ರೂ.ಗೆ ಮತ್ತು ಸ್ಥಳೀಯ ಕರೆದರವನ್ನು 65 ಪೈಸೆಗೆ ಇಳಿಸುವ ಬಗ್ಗೆ ಟ್ರಾಯ್ ಪ್ರಸ್ತಾಪ ಇರಿಸಿತ್ತಾದರೂ ಟೆಲಿಕಾಂ ಕಂಪನಿಗಳ ವಿರೋಧದ ಕಾರಣ ಅದು ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳಿವೆ.