ಕೈರೋ : ಪ್ಯಾರಿಸ್-ಕೈರೋ ಮಧ್ಯೆ ಹಾರಾಟ ನಡೆಸುತ್ತಿದ್ದ ಈಜಿಪ್ಟ್ ಏರ್ಗೆ ಸೇರಿದ ಪ್ರಯಾಣಿಕ ವಿಮಾನ ಮೆಡಿಟರೇನಿಯನ್ ಸಮುದ್ರದಲ್ಲಿ ಪತನಗೊಂಡಿದೆ. ವಿಮಾನದಲ್ಲಿ 66 ಮಂದಿ ಪ್ರಯಾಣಿಕರಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತರಲ್ಲಿ ಇಬ್ಬರು ಮಕ್ಕಳು, 10 ಮಂದಿ ವಿಮಾನ ಸಿಬ್ಬಂದಿ ಒಳಗೊಂಡಿದ್ದಾರೆ. ಮೃತಪಟ್ಟವರಲ್ಲಿ 30 ಜನರು ಈಜಿಪ್ಟ್ ಪ್ರಜೆಗಳಾಗಿದ್ದಾರೆ. ಫ್ರಾನ್ಸ್ನ 15 ಮಂದಿ, ಇಬ್ಬರು ಇರಾಕ್ ಹಾಗೂ ಬ್ರಿಟನ್ ಪ್ರಜೆಗಳು, ಬೆಲ್ಜಿಯಂ, ಕುವೈತ್, ಸೌದಿ ಅರೇಬಿಯಾ, ಸುಡಾನ್, ಚಡ್, ಪೋರ್ಚುಗಲ್, ಅಲ್ಜಿರಿಯಾ ಹಾಗೂ ಕೆನಡಾದ ಓರ್ವ ವ್ಯಕ್ತಿ ದುರ್ಘಟನೆಗೆ ಬಲಿಯಾಗಿದ್ದಾರೆ.
ಪ್ಯಾರಿಸ್ನ ಚಾರ್ಲ್ಸ್ ಡಿ ಗಾಲೆ ವಿಮಾನ ನಿಲ್ದಾಣದಿಂದ ಹೊರಟಿದ್ದ ಈಜಿಪ್ಟ್ ಏರ್ 804 (ಏರ್ಬಸ್ ಎ320) ವಿಮಾನ ಈಜಿಪ್ಟ್ ವಾಯುಸರಹದ್ದಿಗೆ ಪ್ರವೇಶಿಸುತ್ತಿದ್ದಂತೆ 37 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವೇಳೆ ರಾಡಾರ್ ಸಂಪರ್ಕ ಕಡಿತವಾಗಿತ್ತು. ಬಳಿಕ ಅದು ಮೆಡಿಟರೇನಿಯನ್ ಸಮುದ್ರಕ್ಕೆ
ಬಿದ್ದುದನ್ನು ಈಜಿಪ್ಟ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ವಿಮಾನವು ಉಗ್ರರ ದಾಳಿಗೆ ತುತ್ತಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ವಿಮಾನವು ತಾಂತ್ರಿಕ ದೋಷದಿಂದ ಪತನಗೊಂಡಿದೆಯೇ ಅಥವಾ ಭಯೋತ್ಪಾದಕ ದಾಳಿಗೆ ತುತ್ತಾಗಿದೆಯೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಈಜಿಪ್ಟ್ ಪ್ರಧಾನಿ ಷರೀಷ್ ಇಸ್ಮಾಯಿಲ್ ತಿಳಿಸಿದ್ದಾರೆ.