ನವದೆಹಲಿ : 'ಹಳೆ ಜನತಾ ಪರಿವಾರ' ಮತ್ತೆ ಒಂದಾಗುವ ಸಾಧ್ಯತೆಗಳು ನಿಚ್ಚಳವಾಗುತ್ತಿದೆ. ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್.ಜೆ.ಡಿ ಪಕ್ಷದ ನಂತರ ಬಿಹಾರದ ಆಡಳಿತ ಪಕ್ಷ ಜೆಡಿಯು ಹಳೆ ಜನತಾ ಪರಿವಾರದೊಂದಿಗೆ ವಿಲೀನವಾಗಲು ಸಮ್ಮತಿ ಸೂಚಿಸಿದೆ.
ರಾಜ್ಯದ ಜಾತ್ಯಾತೀತ ಜನತಾದಳವೂ ಸೇರಿದಂತೆ ಒಟ್ಟು ಆರುಪಕ್ಷಗಳು ಜನತಾ ಪರಿವಾರದೊಂದಿಗೆ ವಿಲೀನಗೊಳ್ಳಲು ತುದಿಗಾಲಲ್ಲಿ ನಿಂತಿವೆ. ಜನತಾ ಪರಿವಾರದೊಂದಿಗೆ ವಿಲೀನಗೊಳ್ಳಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕೃತವಾಗಿ ಸಮ್ಮತಿ ಸೂಚಿಸಿದ್ದು, ಪಕ್ಷದ ಅಧ್ಯಕ್ಷ ಶರದ್ ಯಾದವ್ ಅವರು ಮುಂದಿನ ಪ್ರಕ್ರಿಯೆಗಳ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಜೆಡಿಯು ಪಕ್ಷದ ಸಭೆಯಲ್ಲಿ ಜನತಾ ಪರಿವಾರದ ಇತರ ಪಕ್ಷಗಳೊಂದಿಗೆ ವಿಲೀನವಾಗುವುದರ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬಿಹಾರದ ಜಲ ಸಂಪನ್ಮೂಲ ಸಚಿವ ವಿಜಯ್ ಕುಮಾರ್ ಹೇಳಿದ್ದಾರೆ.
ಬಿಹಾರದಲ್ಲಿ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನವೇ ವಿಲೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಪಕ್ಷದ ಶಾಸಕರು, ಸಚಿವರು ನಿತೀಶ್ ಕುಮಾರ್ ಅವರನ್ನು ಮನವಿ ಮಾಡಿಕೊಂಡಿದ್ದಾರೆ ಎಂದು ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಏ.6ರಂದು ಹೇಳಿಕೆ ನೀಡಿದ್ದ ನಿತೀಶ್ ಕುಮಾರ್ ಜನತಾ ಪರಿವಾರ ಕೆಲವೇ ದಿನಗಳಲ್ಲಿ ಒಗ್ಗೂಡಲಿದೆ ಎಂದು ಹೇಳಿದ್ದರು.