ನವದೆಹಲಿ : ಕಳೆದ ವರ್ಷ ಅಮೆರಿಕಾದ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ನಡೆದ ಮೋದಿ ಮೋಡಿ, ಕಮ್ಯುನಿಷ್ಟ್ ರಾಷ್ಟ್ರ ಚೀನಾದಲ್ಲೂ ಪುನರಾವರ್ತನೆಯಾಗಲಿದೆ.
ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಅಲ್ಲಿನ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದ ಮೋದಿ ಭಾಷಣ ಇಡೀ ವಿಶ್ವದ ಗಮನ ಸೆಳೆದಿತ್ತು. ಅಂತೆಯೇ ಆಸ್ಟ್ರೇಲಿಯಾ ಭೇಟಿ ಸಂದರ್ಭದಲ್ಲೂ ಮತ್ತೊಂದು ಮ್ಯಾಡಿಸನ್ ಸ್ಕ್ವೇರ್ ಸನ್ನಿವೇಶ ಸೃಷ್ಠಿಯಾಗಿ ಅಪಾರ ಮನ್ನಣೆ ದೊರೆತಿತ್ತು. ಇದೀಗ ಚೀನಾಗೆ ಭೇಟಿ ನೀಡಲಿರುವ ಮೋದಿ, ಟೊರೊಂಟೊದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಚೀನಾದಲ್ಲಿ ನಡೆಯಲಿರುವ ನರೇಂದ್ರ ಮೋದಿ ಭಾಷಣಕ್ಕೆ ಈಗಾಗಲೇ ಸಿದ್ಧತೆಗಳು ನಡೆದಿದ್ದು, ಅನಿವಾಸಿ ಭಾರತೀಯರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಇತ್ತೀಚೆಗಷ್ಟೆ ಚೀನಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂಗ್ರಹಿಸಲಾದ ದಾಖಲೆ ಪ್ರಕಾರ ಚೀನಾದಲ್ಲಿ 45,000 ಅನಿವಾಸಿ ಭಾರತೀಯರಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಿಯಾದ ನಂತರ ಮೋದಿ ಚೀನಾಕ್ಕೆ ಪ್ರಥಮ ಬಾರಿ ಭೇಟಿ ನೀಡುತ್ತಿದ್ದಾರೆ. ಆದರೆ ಚೀನಾದಲ್ಲಿ ಪ್ರಧಾನಿ ಮೋದಿ, ಗುಜರಾತ್ ಮುಖ್ಯಮಂತ್ರಿಯಾಗಿ ಚಿರಪರಿಚಿತರಾಗಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಚೀನಾ ಅಭಿವೃದ್ಧಿ ಮಾದರಿಯನ್ನು ಅಧ್ಯಯನ ಮಾಡಲು ಹಲವು ಬಾರಿ ಚೀನಾಗೆ ಭೇಟಿ ನೀಡಿದ್ದರು.