ವಾಷಿಂಗ್ ಟನ್ : 'ಅಲಬಾಮಾ'ದಲ್ಲಿ ಭಾರತೀಯ ಪ್ರಜೆಯ ಮೇಲೆ ಹಲ್ಲೆ ನಡೆಸಿದ್ದ ಅಮೆರಿಕಾ ಪೊಲೀಸ್ ಅಧಿಕಾರಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದ್ದು, ಭಾರತೀಯ ನಾಗರಿಕನ ಹಕ್ಕುಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಗಿದೆ.
ಎರಿಕ್ ಸ್ಲೋನ್ ಪಾರ್ಕರ್ ಎಂಬ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಇಂಗ್ಲೀಷ್ ಬರುವುದಿಲ್ಲ ಎಂಬ ಕಾರಣಕ್ಕಾಗಿ ಈ ಅಧಿಕಾರಿ ಗುಜರಾತ್ ಮೂಲದ ಸುರೇಶ್ ಭಾಯ್ ಪಟೇಲ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಫೆಬ್ರವರಿಯಲ್ಲಿ ನಡೆದಿದ್ದ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಭಾರತೀಯ ಮೂಲದವರಾದ ಸುರೇಶ್ ಭಾಯ್ ಪಟೇಲ್ ಅವರು ಅಮೆರಿಕಾದಲ್ಲಿರುವ ತಮ್ಮ ಮಗನ ನಿವಾಸಕ್ಕೆ ತೆರೆಳಿದ್ದ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳು ಆತನ ಮೇಲೆ ಹಲ್ಲೆ ನಡೆಸಿದ್ದರು. ಮಾರಣಾಂತಿಕ ಹಲ್ಲೆ ನಡೆಸಿದ ವಿಡಿಯೋ ಕೂಡ ಬಹಿರಂಗವಾಗಿತ್ತು. ಅಮೆರಿಕಾದಲ್ಲಿ ಭಾರತೀಯರಿಗೆ ರಕ್ಷಣೆ ಇಲ್ಲದ ಬಗ್ಗೆ ಭಾರತ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಅಮೆರಿಕಾ ಸರ್ಕಾರ, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್ ಬಿ ಐ) ತನಿಖೆಗೆ ಆದೇಶಿಸಿತ್ತು. ಇದೀಗ ಪೊಲೀಸ್ ಅಧಿಕಾರಿ ವಿರುದ್ಧ ಭಾರತೀಯ ನಾಗರಿಕನ ಹಕ್ಕುಗಳನ್ನು ಉಲ್ಲಂಘಿಸಿದ ಆರೋಪದ ಅಡಿಯಲ್ಲಿ ಚಾರ್ಜ್ ಶೀಟ್ ದಾಖಲಿಸಲಾಗಿದೆ.
ಪೊಲೀಸರ ಹಲ್ಲೆಗೊಳಗಾಗಿದ್ದ ಗುಜರಾತ್ ಮೂಲದ ವ್ಯಕ್ತಿ ಆಂಶಿಕ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಅಮೆರಿಕಾದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.