ನವದೆಹಲಿ : ಜಮ್ಮು-ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳಿಗೆ ನೀಡಲಾಗಿರುವ ವಿಶೇಷಾಧಿಕಾರ ಕಾಯ್ದೆ(AFSPA)ಯನ್ನು ಹಿಂಪಡೆಯಲು ಇದು ಸೂಕ್ತ ಸಮಯ ಅಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಕಳೆದ 2 ದಿನಗಳ ಹಿಂದೆ ಉಗ್ರರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದ ಪ್ರಕರಣದ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸಿ ಹಚ್ಚಹಸಿರಾಗಿರುವ ನೆಲದಲ್ಲಿ ರಕ್ತವನ್ನು ಹರಿಸುತ್ತಿರುವುದ್ದೇಕೆ? ಎಂದು ಪ್ರಶ್ನಿಸಿದ್ದಾರೆ. ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಪಾಕಿಸ್ತಾನ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಪಾಕಿಸ್ತಾನ ಪದೇ ಪದೇ ದಾಳಿ ನಡೆಸಿತ್ತಿದ್ದರೂ ತನ್ನ ಗಡಿ ಭಾಗಗಳನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಭಾರತಕ್ಕಿದೆ. ಗಡಿ ಪ್ರದೇಶದಲ್ಲಿ ಉಗ್ರರ ದಾಳಿಗೆ ಬಿ.ಎಸ್.ಎಫ್ ಯೋಧರು ತಕ್ಕ ಉತ್ತರ ನೀಡುತ್ತಿದ್ದಾರೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ರಚನೆಯಾಗುವ ಹಂತದಲ್ಲಿ ಬಿಜೆಪಿಗೆ ಪಿಡಿಪಿ ವಿಧಿಸಿದ್ದ ಹಲವು ಷರತ್ತುಗಳಲ್ಲಿ ಸಶಸ್ತ್ರ ಪಡೆಗಳಿಗೆ ನೀಡಲಾಗಿರುವ ವಿಶೇಷಾಧಿಕಾರ ಕಾಯ್ದೆ (ಎ.ಎಫ್.ಎಸ್.ಪಿ.ಎ)ಯನ್ನು ಹಿಂಪಡೆಯಬೇಕೆಂಬುದೂ ಒಂದು ಷರತ್ತಾಗಿತ್ತು.