ನವದೆಹಲಿ : 'ಭೂಸ್ವಾಧೀನ ಮಸೂದೆ'ಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕಾಯ್ದೆಯ ಬಗ್ಗೆ ಬಹಿರಂಗ ಚರ್ಚೆಗೆ ಬರಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಹ್ವಾನಿಸಿದ್ದಾರೆ.
ಅಣ್ಣಾ ಹಜಾರೆ ಹಾಗೂ ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಭೂಸ್ವಾಧೀನ ಕಾಯ್ದೆ ಬಗ್ಗೆ ಬಹಿರಂಗ ಚರ್ಚೆಗೆ ತಾವು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಟಿವಿ ಮಾಧ್ಯಮಗಳು ಹಾಗೂ ಪತ್ರಿಕಾ ಮಾಧ್ಯಮಗಳ ಮೂಲಕ ಚರ್ಚೆ ನಡೆಸಲು ಸಿದ್ಧವಿರುವುದಾಗಿ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಭೂಸ್ವಾಧೀನ ಮಸೂದೆಯನ್ನು ವಿರೋಧಿಸಿ ಕಳೆದ ಎರಡು ದಿನಗಳ ಹಿಂದೆ ಸೋನಿಯಾ ಗಾಂಧಿ ತಮ್ಮ ಪಕ್ಷದ ಸದಸ್ಯರೊಂದಿಗೆ ರಾಷ್ಟ್ರಪತಿ ಭವನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಜೊತೆಗೆ ಅಣ್ಣಾ ಹಜಾರೆ ಸೇವಾಗ್ರಾಮದಿಂದ ದೆಹಲಿವರೆಗೆ ರೈತರ ಮೆರವಣಿಗೆ ನಡೆಸುವ ಯೋಜನೆಯನ್ನು ರದ್ದುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿತಿನ್ ಗಡ್ಕರಿ ಬರೆದಿರುವ ಪತ್ರ ಮಹತ್ವ ಪಡೆದಿದೆ.
ಭೂಸ್ವಾಧೀನ ಮಸೂದೆ ಸಂಬಂಧ ನಡೆಯುವ ಚರ್ಚೆಗೆ ಎನ್.ಜಿ.ಒ ಗಳಿಗೂ ಆಹ್ವಾನ ನೀಡುವುದಾಗಿ ನಿತಿನ್ ಗಡ್ಕರಿ ಇದೇ ವೇಳೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಮಸೂದೆ ರೈತ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ಹಾಗೂ ಅಣ್ಣಾ ಹಾಜಾರೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.