Untitled Document
Sign Up | Login    
Dynamic website and Portals
  
May 31, 2015

ಮೇಕ್ ಇನ್ ಇಂಡಿಯಾದಿಂದ ದೇಶಕ್ಕೆ ಹೊಸ ಅವಕಾಶ: ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿದ್ದಂತೆ ವಿಪಕ್ಷಗಳ ಟೀಕೆ- ಟಿಪ್ಪಣಿಗಳ ಭರಾಟೆ ಹೆಚ್ಚಿದೆ. ಬಿಜೆಪಿ ಹೇಳಿದ್ದೊಂದು, ಈಗ ಸರ್ಕಾರ ಮಾಡುತ್ತಿರು ವುದೊಂದು ಎಂಬ ಟೀಕೆ ಕೇಳಿಬರುತ್ತಿದೆ. ಇದರ ಬಗ್ಗೆ ಇಷ್ಟು ದಿನ ಮೌನವಾಗಿದ್ದ ಪ್ರಧಾನಿ ಇದೀಗ ವಿವಿಧ ಮಾಧ್ಯಮಗಳ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ದಿ ಟ್ರಿಬ್ಯೂನ್‌ ಗೆ ಅವರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ನಿಮ್ಮ ಪ್ರಕಾರ ಕೇಂದ್ರ ಸರ್ಕಾರದ 1 ವರ್ಷದ ಪ್ರಮುಖ ಸಾಧನೆಗಳೇನು?

ಈ ಅವಧಿಯಲ್ಲಿ ಒಂದೂ ಭ್ರಷ್ಟಾಚಾರದ ಪ್ರಕರಣ ನಡೆದಿಲ್ಲ ಎಂಬುದು ಹೆಮ್ಮೆಯ ವಿಷಯ. ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಪರಿಣಾಮಕಾರಿತನ ತರುವಲ್ಲಿ ಯಶಸ್ವಿಯಾಗಿದ್ದೇವೆ. ಜನಧನ ಯೋಜನೆ, ಸ್ವತ್ಛ ಭಾರತ ಅಭಿಯಾನ, ಮಣ್ಣಿನ ಆರೋಗ್ಯ ಕಾರ್ಡ್‌ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳು ಜನಸಾಮಾನ್ಯರಿಗೆ ಹೆಚ್ಚು ಆದಾಯ ಹಾಗೂ ಭದ್ರತೆ ತರುವ ಗುರಿ ಹೊಂದಿವೆ. ಮೂಲಸೌಕರ್ಯಕ್ಕೆ ಬಂದರೆ, ಪ್ರತಿದಿನ 20 ಕಿ.ಮೀ ರಸ್ತೆ ನಿರ್ಮಿಸುವ ಗುರಿ ಹಾಕಿಕೊಂಡಿದ್ದೇವೆ. ಅದರಂತೆ ದಿನಕ್ಕೆ ಕನಿಷ್ಠ ಪಕ್ಷ ಸರಾಸರಿ 11 ಕಿ.ಮೀ ರಸ್ತೆ ನಿರ್ಮಾಣವಾಗುತ್ತಿದೆ. ವಿದ್ಯುತ್‌ ಉತ್ಪಾದನೆ ಶೇ.9ರಷ್ಟು ಹೆಚ್ಚಿದೆ. ಭವಿಷ್ಯದ ಹಿತವನ್ನೂ ಗಮನದಲ್ಲಿಟ್ಟುಕೊಂಡು ನವೀಕರಿಸಬಹುದಾದ ಇಂಧನಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡಿದ್ದೇವೆ. ಪ್ರತಿ ಶಾಲೆಯಲ್ಲಿ ಶೌಚಾಲಯ ನಿರ್ಮಿಸುವ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಎಲ್‌ಪಿಜಿ ಸಬ್ಸಿಡಿ ಹಾಗೂ ವಿದ್ಯಾರ್ಥಿವೇತನಗಳನ್ನು ಜನರ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದರಿಂದ ಭ್ರಷ್ಟಾಚಾರ ಹಾಗೂ ಜನರ ಕಷ್ಟ ಎರಡೂ ಕಡಿಮೆಯಾಗಿದೆ. ಗಂಗಾ ಶುದ್ಧೀಕರಣ, ಕೌಶಲ್ಯಾಭಿವೃದ್ಧಿ, ಹಳ್ಳಿಗಳಿಗೆ ಮೊಬೈಲ್‌ ಮತ್ತು ಬ್ರಾಡ್‌ಬ್ಯಾಂಡ್‌ ಸಂಪರ್ಕ, ಮೇಕ್‌ ಇನ್‌ ಇಂಡಿಯಾ ಯೋಜನೆಗಳು ದೇಶಕ್ಕೆ ಹೊಸ ಅವಕಾಶ ತೆರೆಯಲಿವೆ. ಇದು ಆರಂಭವಷ್ಟೆ.

ಹಿಂದಿನ ಸರ್ಕಾರದ ಭೂಸ್ವಾಧೀನ ಮಸೂದೆಯನ್ನು ಬಿಜೆಪಿ ಒಪ್ಪಿಕೊಂಡಿತ್ತು. ಈಗ ಅದನ್ನೇ ತಿದ್ದುಪಡಿ ಮಾಡುತ್ತಿದ್ದೀರಿ. ಏಕೆ? ಇದು ರೈತವಿರೋಧಿ ಹಾಗೂ ಉದ್ಯಮಿಗಳ ಪರವಾಗಿರುವ ಮಸೂದೆ ಎಂದು ಜನ ಹೇಳುತ್ತಿದ್ದಾರೆ.

60ವರ್ಷಗಳ ಕಾಲ ಹಳೆಯ ಭೂಸ್ವಾಧೀನ ಕಾಯ್ದೆ ಜಾರಿಯಲ್ಲಿತ್ತು. ಅಷ್ಟೂ ಕಾಲ ಸರ್ಕಾರ ರೈತ ವಿರೋಧಿಯಾಗಿತ್ತೇ? 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದವರಿಗೆ ಈಗ ನಮ್ಮನ್ನು ವಿರೋಧಿಸುವ ಹಕ್ಕಿಲ್ಲ. ಹಿಂದೆ ಇದ್ದ ಕಾಯ್ದೆ 120 ವರ್ಷ ಹಳೆಯದು. ರಾಜಕೀಯ ಲಾಭಕ್ಕಾಗಿ ಯುಪಿಎ ಸರ್ಕಾರ ಅವಸರದಲ್ಲಿ ಹೊಸ ಕಾಯ್ದೆ ತಂದಿತು. ಸಂಸತ್ತಿನಲ್ಲಿ ಬಿಜೆಪಿ ನೀಡಿದ ಸಲಹೆಗಳನ್ನು ಕಾಯ್ದೆಯಲ್ಲಿ ಸೇರಿಸುವುದಾಗಿ ಮೌಖೀಕವಾಗಿ ಒಪ್ಪಿಕೊಂಡು ನಂತರ ಕಾಯ್ದೆ ಅಂಗೀಕರಿಸುವಾಗ ಅದನ್ನು ಸೇರಿಸಿರಲಿಲ್ಲ. ನಾವು ಅಧಿಕಾರಕ್ಕೆ ಬಂದು ನೋಡಿದಾಗ ಕಾಯ್ದೆಯಲ್ಲಿ ಕೆಲ ರೈತವಿರೋಧಿ ನೀತಿಗಳು ಕಾಣಿಸಿದವು.

ಕಾಂಗ್ರೆಸಿಗರೂ ಸೇರಿದಂತೆ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಈ ಕಾಯ್ದೆ ವಿರೋಧಿಸುತ್ತಿದ್ದರು. 2013ರಲ್ಲಿ ನಾವು ಬೆಂಬಲಿಸಿದ್ದೇವೆ, ಹಾಗಾಗಿ ಈಗ ಬದಲಾಯಿಸುವುದಿಲ್ಲ ಎಂದು ಪ್ರತಿಷ್ಠೆಯಿಂದ ಕುಳಿತಿರಬೇಕಿತ್ತೇ? ಅಭಿವೃದ್ಧಿಗೆ ಹಾಗೂ ರೈತರ ಹಿತಕ್ಕೆ ಮಾರಕವಾಗಿರುವ ಕೆಲ ನೀತಿಗಳನ್ನು ಬದಲಿಸಲೇಬೇಕಿತ್ತು. ಆದ್ದರಿಂದ ಸುಗ್ರೀವಾಜ್ಞೆ ತಂದೆವು. ನನಗೇನೂ ಇದು ಜೀವನ್ಮರಣದ ಪ್ರಶ್ನೆಯಲ್ಲ. ಇದು ನಮ್ಮ ಸರ್ಕಾರದ ಅಜೆಂಡಾ ಕೂಡ ಆಗಿರಲಿಲ್ಲ. ರಾಜ್ಯಗಳ ಬೇಡಿಕೆಗೆ ಓಗೊಡುವುದು ನಮ್ಮ ಕರ್ತವ್ಯ. ಈಗಲೂ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ಧ.

ನೀವು ಉದ್ಯಮಿಗಳ ಪರ ನಿಂತಿದ್ದೀರಿ, ನಿಮ್ಮದು ಸೂಟ್‌ ಬೂಟ್‌ ಸರ್ಕಾರ್‌ ಎಂದು ಪ್ರತಿಪಕ್ಷಗಳು ಹೇಳುತ್ತಿವೆಯಲ್ಲ?

ಹಿರಿಯ ಪತ್ರಕರ್ತರೆಲ್ಲ ಸೇರಿ ಒಂದು ಸಮಿತಿ ರಚಿಸಿಕೊಂಡು ನನ್ನ ಸರ್ಕಾರದ ವಿರುದ್ಧ ಮಾಡಲಾಗುತ್ತಿರುವ ಟೀಕೆಗಳ ಪಟ್ಟಿ ತಯಾರಿಸಬೇಕೆಂದು ಮನವಿ ಮಾಡುತ್ತೇನೆ. ಕೆಲವರು M.O.ಈ.ಐ ಎಂಬ ಪದಕ್ಕೆ ಏನೇನೋ ಅರ್ಥ ಹೇಳುತ್ತಾರೆ, ಇನ್ನು ಕೆಲವರು ಎನ್‌.ಡಿ.ಎ ಅಲ್ಲ ಎಂ.ಎನ್‌.ಡಿ.ಎ ಎನ್ನುತ್ತಾರೆ. ನಾವು ದುರಹಂಕಾರಿಗಳು ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಸೂಟು, ಬೂಟು, ಕೋಟು, ಕೂದಲು ಇತ್ಯಾದಿಗಳ ಬಗ್ಗೆ ಮಾತಾಡುತ್ತಾರೆ. ಅವರೆಷ್ಟು ದಿವಾಳಿಯಾಗಿದ್ದಾರೆಂದು ಇದರಿಂದಲೇ ತಿಳಿಯುತ್ತದೆ. ಅವರಿಗೆ ಒಂದೇ ಒಂದು ಪ್ರಮುಖ ಸಮಸ್ಯೆ ಹುಡುಕಲು ಆಗುತ್ತಿಲ್ಲ. ನನ್ನ ಸರ್ಕಾರದ ಅತಿದೊಡ್ಡ ಸಾಧನೆ ಇದೇ. ಇಷ್ಟಕ್ಕೂ ಸೂಟ್‌ ಕೇಸ್‌ (ಲಂಚ) ಸರ್ಕಾರಕ್ಕಿಂತ ಸೂಟ್‌ ಬೂಟ್‌ ಸರ್ಕಾರವೇ ಮೇಲು, ಬಿಡಿ.

ಕಪ್ಪು ಹಣ ವಾಪಸ್‌ ತರುತ್ತೇನೆ ಎಂದಿದ್ದಿರಿ. ಏನಾಯಿತು?

ಮೊದಲನೆಯದಾಗಿ, ಇಲ್ಲಿಯವರೆಗೆ ಆಡಳಿತ ನಡೆಸಿದ ಯಾರಿಗೂ ಕಪ್ಪು ಹಣದ ವಿಷಯದಲ್ಲಿ ನನ್ನ ಸರ್ಕಾರ ಏನು ಮಾಡಿದೆ ಎಂದು ಕೇಳುವ ಹಕ್ಕಿಲ್ಲ. ಕಪ್ಪು ಹಣ ಎಂಬುದು ಹುಟ್ಟಿಕೊಂಡಿದ್ದೇ ಈ ಸರ್ಕಾರಗಳು ಅದನ್ನು ನಿಯಂತ್ರಿಸದೇ ಇದ್ದುದರಿಂದ. ಸುಪ್ರೀಂಕೋರ್ಟ್‌ ಆದೇಶ ನೀಡಿದರೂ ಸಹ ಅವರು ಕಪ್ಪು ಹಣದ ತನಿಖೆಗೆ 3 ವರ್ಷ ವಿಶೇಷ ತನಿಖಾ ದಳ ರಚನೆ ಮಾಡಲಿಲ್ಲ. ಅಂದರೆ ಈ ಅವಧಿಯಲ್ಲಿ ಕಪ್ಪು ಹಣದ ಮಾಲಿಕರೆಲ್ಲ ಬಚಾವಾಗಲು ಸರ್ಕಾರವೇ ಸಹಾಯ ಮಾಡಿತು. ಸುಪ್ರೀಂಕೋರ್ಟ್‌ ಹೇಳಿದಾಕ್ಷಣ ಕೆಲಸ ಮಾಡಿದ್ದರೆ ದೇಶಕ್ಕೆ ನೂರಾರು ಕೋಟಿ ರೂ. ವಾಪಸ್‌ ಬಂದಿರುತ್ತಿತ್ತು. ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯ ಮೊದಲ ನಿರ್ಣಯವೇ ಕಪ್ಪು ಹಣದ ತನಿಖೆಗೆ ವಿಶೇಷ ತನಿಖಾ ದಳ ರಚನೆ ಮಾಡಿದ್ದು. ನಿಜ, ನಾವು ಕಪ್ಪು ಹಣ ಇರಿಸಿದವರ ಹೆಸರನ್ನು ಮಾಧ್ಯಮಗಳಿಗೆ ನೀಡಲಿಲ್ಲ. ಏಕೆಂದರೆ ಅದಕ್ಕೆ ಕಾಯ್ದೆಯಲ್ಲಿ ಅವಕಾಶವಿಲ್ಲ. ಕಪ್ಪು ಹಣ ವಾಪಸ್‌ ತರಲು ನಮಗೆ ಬೇರೆ ದೇಶಗಳ ಸಹಕಾರವೂ ಬೇಕು. ಜಿ20 ಶೃಂಗದಲ್ಲಿ ಈ ಸಹಕಾರ ಕೋರಿ ಅದನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಕಪ್ಪು ಹಣ ಇರಿಸಿದವರ ಬಗ್ಗೆ ಯಾರ ಬಳಿ ಮಾಹಿತಿಯಿದ್ದರೂ ನಮಗೆ ನೀಡಬಹುದು. ಈ ವಿಷಯದಲ್ಲಿ ನಾವು ರಚಿಸಿದಷ್ಟು ಕಠಿಣ ಕಾಯ್ದೆ ರಚಿಸುವ ಧೈರ್ಯವನ್ನು ಯಾರಾದರೂ ಮಾಡಿದ್ದಾರಾ?

ಒಂದು ರಾಜ್ಯವನ್ನು ಮುನ್ನಡೆಸುವುದಕ್ಕೂ ದೇಶವನ್ನು ಮುನ್ನಡೆಸುವುದಕ್ಕೂ ವ್ಯತ್ಯಾಸವಿದೆಯೇ?

ಮೂಲಭೂತವಾಗಿ ಯಾವ ವ್ಯತ್ಯಾಸವೂ ಇಲ್ಲ. ಅಂತಿಮವಾಗಿ ಆಡಳಿತ ಎಂಬುದು ಮಾನವ ಸಂಪನ್ಮೂಲದ ಸಮರ್ಪಕ ಬಳಕೆ. ಆದರೆ ಕೇಂದ್ರದಲ್ಲಿ ಕೆಲ ಹೊಸ ಜವಾಬ್ದಾರಿಗಳಿರುತ್ತವೆ. ಉದಾಹರಣೆಗೆ, ರಕ್ಷಣೆ ಹಾಗೂ ವಿದೇಶಾಂಗ ವ್ಯವಹಾರ. ಸಮಸ್ಯೆಯೇನೆಂದರೆ, ರಾಜ್ಯಗಳಲ್ಲಿರುವಂತೆ ನಿಶ್ಚಿತ ಅಧಿಕಾರಿಗಳ ತಂಡವೊಂದು ಕೇಂದ್ರದಲ್ಲಿರುವುದಿಲ್ಲ. ಅಧಿಕಾರಿಗಳು ವಿವಿಧ ರಾಜ್ಯಗಳಿಂದ 2-3 ವರ್ಷದ ಅವಧಿಗಾಗಿ ಇಲ್ಲಿಗೆ ಬರುತ್ತಾರೆ. ಹಾಗಾಗಿ ದೆಹಲಿಯಿಂದ ಒಳ್ಳೆಯ ಆಡಳಿತ ನೀಡಬೇಕೆಂದರೆ ಇಲ್ಲಿಯದೇ ಆದ, ಇಲ್ಲೇ 30-35 ವರ್ಷ ಕಳೆಯುವ ಅಧಿಕಾರಿಗಳ ತಂಡ ಕಟ್ಟಬೇಕು.

"ಅಚ್ಛೇ ದಿನ್‌ ಬಂತಾ' ಎಂದು ಜನ ಆಡಿಕೊಳ್ಳತೊಡಗಿದ್ದಾರೆ. ಅಚ್ಛೇ ದಿನ್‌ ಅಂದರೆ ಏನು ಮತ್ತು ಅದು ಬಂದಿದೆಯೇ?

ಹಾಸಿಗೆ ಹಿಡಿದ ವ್ಯಕ್ತಿಯನ್ನು ನೋಡಲು ಹೋದಾಗ ನಾವು "ಹೆದರಬೇಡಿ, ಎಲ್ಲ ಒಳ್ಳೆಯದಾಗುತ್ತದೆ' ಎನ್ನುತ್ತೇವೆ. ಅಚ್ಛೇ ದಿನ್‌ ಎಂಬ ಚಿಂತನೆ ಇದೇ ರೀತಿಯದು. ನನ್ನ ಪ್ರಕಾರ ಅಚ್ಛೇ ದಿನ್‌ ಅಂದರೆ ಕೆಟ್ಟ ದಿನಗಳಿಂದ ಮುಕ್ತರಾಗುವುದು. ಅದನ್ನು ನಾವು ಸಾಧಿಸಿದ್ದೇವೆ. ಆದರೆ ನಮ್ಮ ವಿರೋಧಿಗಳು ಈ ಚಿಂತನೆಯನ್ನು ತಮಾಷೆಯಾಗಿಸಿದ್ದಾರೆ. ಒಂದು ರೈಲು ತಡವಾಗಿ ಬಂದರೂ "ಅಚ್ಛೇ ದಿನ್‌ ಬಂತಾ' ಎಂದು ಕೇಳುತ್ತಾರೆ. 1970ರಿಂದ ಕಾಂಗ್ರೆಸ್‌ ಪಕ್ಷದ ಘೋಷಣೆ "ಗರೀಬಿ ಹಠಾವೋ' ಆಗಿತ್ತಲ್ಲ, ಆ ಪಕ್ಷದವರ ಬಳಿ ಬಡತನದ ಕತೆ ಏನಾಯ್ತು ಎಂದೇಕೆ ಕೇಳುವುದಿಲ್ಲ? ಅವರಿಗೆ ಸಂಸತ್ತಿನಲ್ಲಿ 415 ಸೀಟುಗಳ ಬಲವಿತ್ತು. ಒಂದೇ ಕುಟುಂಬದ ನಾಲ್ವರು ದೇಶ ಆಳಿದರು. ಅದರಿಂದ ಏನು ಸಾಧಿಸಿದರು? ನನ್ನ ಮನಸ್ಸಿನಲ್ಲಿರುವ ಅಚ್ಛೇ ದಿನ್‌ ಅಂದರೆ ಕೆಟ್ಟ ದಿನಗಳನ್ನು ದೂರ ಮಾಡುವುದು. ಭ್ರಷ್ಟಾಚಾರ, ಹಗರಣ, ಆಡಳಿತಕ್ಕೆ ಪಾರ್ಶ್ವವಾಯು, ಕಪ್ಪು ಹಣ... ಇವುಗಳಿಂದ ದೇಶ ಕಂಗೆಟ್ಟಿತ್ತು. ಈ ಸಮಸ್ಯೆಗಳು ಈಗ ಇಲ್ಲವಲ್ಲ. ಇದೇ ಅಚ್ಛೇ ದಿನ್‌.

ಆರ್ಥಿಕತೆಯಲ್ಲಿ ಆಗಿರುವ ಸುಧಾರಣೆ ತೃಪ್ತಿ ತಂದಿದೆಯೇ?

ಹಿಂದಿನ ಸರ್ಕಾರದ 10 ವರ್ಷ ಬೆಲೆಯೇರಿಕೆ ಹಾಗೂ ಹಣದುಬ್ಬರಕ್ಕೆ ಹೆಸರಾಗಿತ್ತು. ಬೇಡಿಕೆ ಹಾಗೂ ಪೂರೈಕೆಯಲ್ಲಿ ನಾವು ಸಮತೋಲನ ಸಾಧಿಸಲು ಕೈಗೊಂಡ ಪ್ರಯತ್ನದಿಂದಾಗಿ ಈಗ ಹಣದುಬ್ಬರ ನಿಯಂತ್ರಣಕ್ಕೆ ಬಂದಿದೆ. ಆರ್ಥಿಕ ಸುಧಾರಣೆಗೆ ನಾವು ಕೈಗೊಂಡ ಕ್ರಮಗಳನ್ನು ದೇಶದೊಳಗಷ್ಟೇ ಅಲ್ಲ, ಐಎಂಎಫ್, ವಿಶ್ವಬ್ಯಾಂಕ್‌, ಒಇಸಿಡಿಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳೂ ಶ್ಲಾ ಸಿವೆ. ನಾವು ಅಧಿಕಾರಕ್ಕೆ ಬಂದ ತಕ್ಷಣ ಅಕ್ರಮ ದಾಸ್ತಾನುಗಳನ್ನು ಮಟ್ಟಹಾಕಿ ಮಾರುಕಟ್ಟೆಗೆ ಹೆಚ್ಚು ಆಹಾರಧಾನ್ಯ ಬಿಡುಗಡೆಯಾಗುವಂತೆ ಮಾಡಿದೆವು. ಕೊರತೆಯಿದ್ದ ವಸ್ತುಗಳನ್ನು ಆಮದು ಮಾಡಿಕೊಂಡೆವು. ವಿತ್ತೀಯ ಕೊರತೆಯನ್ನು ಶೇ.4.1ಕ್ಕೆ ಇಳಿಸುವ ಗುರಿ ಸಾಧನೆಯಾಗಿ ಅದು ಶೇ.4ಕ್ಕೆ ಇಳಿದಿದೆ. ವಿದೇಶಿ ನೇರ ಹೂಡಿಕೆ, ಸಾಂಸ್ಥಿಕ ಹೂಡಿಕೆ, ವಿದೇಶಿ ಮೀಸಲು ದಾಖಲೆ ಪ್ರಮಾಣದಲ್ಲಿ ಹೆಚ್ಚಿವೆ. ಕಳೆದ ವರ್ಷದ ಜಿಡಿಪಿ ಬೆಳವಣಿಗೆ ಶೇ.7.4ರಷ್ಟಿತ್ತು. ಈ ವರ್ಷ ಜಗತ್ತಿನ ಎಲ್ಲ ದೇಶಗಳ ಅಭಿವೃದ್ಧಿ ದರಕ್ಕಿಂತ ಅದು ಹೆಚ್ಚಾಗಲಿದೆ.

ಆದರೆ ತೈಲ ಬೆಲೆ ಕುಸಿದಿದ್ದರಿಂದ ನಿಮ್ಮ ಅದೃಷ್ಟ ಖುಲಾಯಿಸಿತು ಎಂದು ಹೇಳುತ್ತಾರಲ್ಲ?

ನಾನು ಅದೃಷ್ಟಶಾಲಿ ಎಂದು ನಾನೇ ಹೇಳಿಕೊಂಡಾಗ ಜನರು ಟೀಕಿಸುತ್ತಾರೆ. ಈಗ ಮೋದಿ ಅದೃಷ್ಟಶಾಲಿ ಎಂದು ಅವರೇ ಹೇಳುತ್ತಾರೆ. ಏನಿದು? ಹಣದುಬ್ಬರ ನಿಯಂತ್ರಣವಾಗಿದ್ದು ನಾವು ಕೈಗೊಂಡ ಕ್ರಮಗಳಿಂದ. ಆದರೆ ಇದು ಏರಿಳಿತವಾಗುವ ಸಂಗತಿ. ಹಾಗಾಗಿ ಪ್ರಯತ್ನ ನಿರಂತರವಾಗಿರಬೇಕು. ಅದನ್ನು ಅದೃಷ್ಟಕ್ಕೆ ಬಿಟ್ಟು ಸುಮ್ಮನೆ ಕೂರುವುದಿಲ್ಲ.

ನಿವೃತ್ತ ಸೇನಾಧಿಕಾರಿಗಳಿಗೆ "ಏಕಶ್ರೇಣಿ, ಏಕ ರೀತಿಯ ಪಿಂಚಣಿ' ಯೋಜನೆ ನಿಜಕ್ಕೂ ಜಾರಿ ಮಾಡುತ್ತೀರಾ?

ಒನ್‌ ರ್‍ಯಾಂಕ್‌ ಒನ್‌ ಪೆನ್ಶನ್‌ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ. ನಮ್ಮ ಸರ್ಕಾರ ಇನ್ನೂ 4 ವರ್ಷ ಇರಲಿದೆ. ಸಂಬಂಧಪಟ್ಟ ವ್ಯಕ್ತಿಗಳ ಜತೆ ಸಮಾಲೋಚನೆ ನಡೆಸದೇ ಯಾವುದೇ ಕ್ರಮ ಕೈಗೊಳ್ಳಲು ಆಗದು. ಹೀಗಾಗಿ ಮಾತುಕತೆ ನಡೆಯುತ್ತಿದೆ. ಈ ವಿಚಾರ ರಾಜಕೀಯ ಕಾರ್ಯಕ್ರಮವಲ್ಲ.

ನಿಮಗಿಂತ ಮೊದಲು ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿದ್ದವರು ರಾಜೀವ್‌ ಗಾಂಧಿ. ಜನರ ನಿರೀಕ್ಷೆ ನೋಡಿದರೆ ನನಗೆ ಹೆದರಿಕೆಯಾಗುತ್ತದೆ ಎಂದು ಅವರೊಮ್ಮೆ ಹೇಳಿದ್ದರು. ನಿಮಗೂ ಹೆದರಿಕೆಯಿದೆಯೇ?

ದೇಶದಲ್ಲಿರುವ ಅವಕಾಶಗಳು ಹಾಗೂ ಸಾಧ್ಯತೆಗಳನ್ನು ನೋಡಿದರೆ ನನಗೆ ನಮ್ಮದು ಬಡ ದೇಶ ಅಥವಾ ಅಭಿವೃದ್ಧಿ ಹೊಂದಿಲ್ಲದ ದೇಶ ಎಂದು ಹೇಳಲು ಯಾವುದೇ ಕಾರಣ ಕಾಣುತ್ತಿಲ್ಲ. ನಾನು ಸ್ವತ್ಛ ಭಾರತ ಯೋಜನೆ ಘೋಷಿಸುವಾಗ ರಿಸ್ಕ್ ತೆಗೆದುಕೊಳ್ಳುತ್ತಿದ್ದೇನೆ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೆ ಅದಕ್ಕೆ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆ ನನ್ನ ನಿರೀಕ್ಷೆಯನ್ನೂ ಮೀರಿತ್ತು. ಈಗಾಗಲೇ ನಾನು ಸರ್ಕಾರಿ ಯಂತ್ರಕ್ಕಿರುವ ಶಕ್ತಿ ಅರಿತಿದ್ದೇನೆ. ಜನಧನ ಖಾತೆ ತೆರೆಸುವ ಯೋಜನೆಯಲ್ಲಿ ನನಗದು ಅರ್ಥವಾಗಿದೆ. ಸರಿಯಾದ ಮಾರ್ಗದರ್ಶನ ಹಾಗೂ ನೀಲನಕ್ಷೆ ನೀಡಿದರೆ ಸರ್ಕಾರಿ ನೌಕರರು ಏನು ಬೇಕಾದರೂ ಸಾಧಿಸಬಲ್ಲರು ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.

ಎರಡನೇ ವರ್ಷದಲ್ಲಿ ಸರ್ಕಾರದಿಂದ ನಾವೇನು ನಿರೀಕ್ಷಿಸಬಹುದು?

ಅಭಿವೃದ್ಧಿ ಅಭಿವೃದ್ಧಿ ಮತ್ತು ಅಭಿವೃದ್ಧಿ. ಉದ್ಯೋಗ ಉದ್ಯೋಗ ಮತ್ತು ಉದ್ಯೋಗ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited