ದಿಮಾಪುರ್ : ಯುವತಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಪ್ರತಿನಟನೆಗಿಳಿದ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಜೈಲಿಗೆ ನುಗ್ಗಿ ಆರೋಪಿಯನ್ನು ಹೊರಗೆಳೆದು ತಂದು ನಗ್ನಗೊಳಿಸಿ ಥಳಿಸಿ ಹತ್ಯೆಗೈದ ಘಟನೆ ನಾಗಾಲ್ಯಾಂಡ್ ನ ದಿಮಾಪುರ್ ನ ವಾಣಿಜ್ಯ ನಗರದಲ್ಲಿ ನಡೆದಿದೆ.
ಹತ್ಯೆಗೀಡಾದ ಅತ್ಯಾಚಾರ ಆರೋಪಿ 35 ವರ್ಷದ ಸಯೀದ್ ಫರಿದ್ ಖಾನ್ ಎನ್ನುವ ಬಾಂಗ್ಲಾ ವಲಸಿಗನಾಗಿದ್ದು, ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಟ ಮಾಡಿಕೊಡಿದ್ದ ಈತ ನಾಗಾ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಫೆಬ್ರವರಿ 23 ರಂದು ಬಂಧನಕ್ಕೊಳಗಾಗಿದ್ದ.
ಜೈಲಿನ ಎರಡೂ ಗೇಟ್ ಗಳನ್ನು ಮುರಿದು ಒಳ ನುಗ್ಗಿದ ಸಾವಿರಾರು ಉದ್ರಿಕ್ತರು ಆರೋಪಿಯನ್ನು ಹಿಡಿದು ಹೊರಗೆಳೆದುತಂದು ನಗ್ನಗೊಳಿಸಿ ಪಟ್ಟಣದಾಧ್ಯಂತ ಮೆರವಣಿಗೆ ನಡೆಸಿದ್ದಾರೆ.
ಆರೋಪಿಯನ್ನು ಪೊಲೀಸರು ಬಿಡಿಸಕೊಳ್ಳುವಷ್ಟರಲ್ಲಿ ಮಾರಣಾಂತಿಕ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಆತನ ಪ್ರಾಣ ಹಾರಿಹೋಗಿತ್ತು.
ದಂಗೆ ಎದ್ದಿದ್ದ ಜನರ ಆಕ್ರೋಷದ ಎದುರು ಪೊಲೀಸರು ಅಸಹಾಯಕರಾಗಿ ಮೂಕ ಪ್ರೇಕ್ಷಕರಾಗಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು.
ದಾಳಿಯ ವೇಳೆ ಸಮಯ ಸಾಧಿಸಿ ಜೈಲಿನಲ್ಲಿದ್ದ ಇನ್ನಿಬ್ಬರು ಖೈದಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ವೇಳೆ 10 ಕ್ಕೂ ಹೆಚ್ಚು ವಾಹನಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದು ಮಾತ್ರ ವಲ್ಲದೆ ಪೊಲೀಸರ ಮೇಲೂ ಕಲ್ಲೂತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.